ಸಂಸತ್ತಿನ ಹೊಸ ಕಟ್ಟಡ ನಿರ್ಮಿಸಲಿರುವ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್
ಹೊಸದಿಲ್ಲಿ, ಸೆಪ್ಟೆಂಬರ್17: 861.90 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುವ ಬಿಡ್ ಅನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಬುಧವಾರ ಪಡೆದು ಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ ಅಂಡ್ ಟಿ ಲಿಮಿಟೆಡ್ 865 ಕೋಟಿ ರೂ.ಗಳ ಬಿಡ್ ಸಲ್ಲಿಸಿದೆ ಎಂದ ಅವರು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ 861.90 ಕೋಟಿ ರೂ.ಗಳ ಬಿಡ್ ಸಲ್ಲಿಸಿ ಹೊಸ ಸಂಸತ್ತು ಕಟ್ಟಡವನ್ನು ನಿರ್ಮಿಸುವ ಒಪ್ಪಂದವನ್ನು ಗೆದ್ದಿದೆ ಎಂದು ತಿಳಿಸಿದ್ದಾರೆ.
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ಹೊಸ ಸಂಸತ್ತಿನ ಕಟ್ಟಡವನ್ನು ಈಗಿರುವ ಕಟ್ಟಡಕ್ಕೆ ಹತ್ತಿರದಲ್ಲಿ ನಿರ್ಮಿಸಲಾಗುವುದು ಮತ್ತು ಇದು 21 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಪ್ರಕಾರ, ಹೊಸ ಕಟ್ಟಡವು ಪಾರ್ಲಿಮೆಂಟ್ ಹೌಸ್ ಎಸ್ಟೇಟ್ ನ ಬಳಿ ನಿರ್ಮಾಣವಾಗಲಿದೆ.
ಯೋಜನೆಯನ್ನು ಕಾರ್ಯಗತಗೊಳಿಸಿದ ಸಂಪೂರ್ಣ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಸಂಸತ್ತಿನ ಕಟ್ಟಡವು ಮುಂದುವರಿಯುತ್ತದೆ ಎಂದು ಸಿಪಿಡಬ್ಲ್ಯೂಡಿ ಹೇಳಿದೆ.