ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭಾರತ್ ಜೋಡೋ ಯುವ ಸಂಘಗಳ ಯೋಜನೆ ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಯೋಜನೆಯು ಸಾಮಾನ್ಯ ಜನರಿಗಾಗಿ ಅಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷದ ನಿರುದ್ಯೋಗಿ ಕಾರ್ಯಕರ್ತರಿಗೆ ಸರ್ಕಾರಿ ಹಣದಲ್ಲಿ ಪುನರ್ವಸತಿ ಕಲ್ಪಿಸುವ ಗಂಜಿ ಕೇಂದ್ರಗಳಾಗಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರವಾಗಿ ಆರೋಪಿಸಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತೆರಿಗೆದಾರರ ಸಾವಿರ ಕೋಟಿ ಹಣ ಕಾಂಗ್ರೆಸ್ಸಿಗರ ಪಾಲು
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಹೆಸರನ್ನು ಬಳಸಿಕೊಂಡು ರಾಜ್ಯದ ತೆರಿಗೆದಾರರ ಸುಮಾರು 1,010 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚಲು ಸರ್ಕಾರ ಸಂಚು ರೂಪಿಸಿದೆ ಎಂದು ಅಶೋಕ್ ದೂರಿದರು. ಪ್ರತಿಯೊಂದು ಸಂಘಕ್ಕೆ ತರಬೇತುದಾರರ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿ ಅವರಿಗೆ ತಿಂಗಳಿಗೆ 24 ಸಾವಿರ ರೂಪಾಯಿ ವೇತನ ನೀಡಲು ಹೊರಟಿರುವುದು ಜನ ಸಾಮಾನ್ಯರ ಬೆವರಿನ ಹಣದ ದುರ್ಬಳಕೆಯಾಗಿದೆ. ರೈತರು, ವಿಧವೆಯರು ಮತ್ತು ವೃದ್ಧರಿಗೆ ನೀಡಬೇಕಾದ ಪಿಂಚಣಿ ಹಣವನ್ನು ನೀಡದೆ ತಡೆಹಿಡಿದಿರುವ ಸರ್ಕಾರ, ತನ್ನ ಪಕ್ಷದವರಿಗಾಗಿ ಇಷ್ಟು ದೊಡ್ಡ ಮೊತ್ತ ವ್ಯಯಿಸುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳ ಕಹಿ ಸತ್ಯ ಬಿಚ್ಚಿಟ್ಟ ಅಶೋಕ್
ಸರ್ಕಾರದ ಗ್ಯಾರಂಟಿ ಯೋಜನೆಗಳ ಅಸಲಿಯತ್ತನ್ನು ಬಿಚ್ಚಿಟ್ಟ ಅಶೋಕ್, ಗೃಹಲಕ್ಷ್ಮಿ ಯೋಜನೆಗೆ ಐದು ಸಾವಿರ ಕೋಟಿ ರೂಪಾಯಿ ಹಾಗೂ ಅನ್ನಭಾಗ್ಯ ಯೋಜನೆಗೆ 750 ಕೋಟಿ ರೂಪಾಯಿಗಳ ಬಾಕಿ ಹಣವನ್ನು ಸರ್ಕಾರ ಇನ್ನೂ ಪಾವತಿಸಿಲ್ಲ ಎಂದರು. ಸ್ವತಃ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಹಣದ ಕೊರತೆಯ ಬಗ್ಗೆ ಕಣ್ಣೀರು ಹಾಕಿದ್ದರು. ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಹಣ ತಲುಪುತ್ತಿಲ್ಲ, ಆದರೆ ಕಾಂಗ್ರೆಸ್ಸಿಗರಿಗೆ ಮಾತ್ರ ದಿನಕ್ಕೊಂದು ಹೊಸ ಹೊಸ ಯೋಜನೆಗಳು ಘೋಷಣೆಯಾಗುತ್ತಿವೆ ಎಂದು ಅವರು ಕಿಡಿಕಾರಿದರು.
ಸಚಿವ ಸ್ಥಾನಕ್ಕೆ ನೂರು ಕೋಟಿ ಪೇಮೆಂಟ್ ಸರ್ಕಾರ
ರಾಜ್ಯ ಸರ್ಕಾರವನ್ನು ರಿಯಲ್ ಎಸ್ಟೇಟ್ ಸರ್ಕಾರ ಎಂದು ಕರೆದ ಆರ್. ಅಶೋಕ್, ಸಚಿವ ಸಂಪುಟದ ವಿಸ್ತರಣೆ ಮತ್ತು ಬದಲಾವಣೆಗಳ ಕುರಿತು ಸ್ಫೋಟಕ ಹೇಳಿಕೆ ನೀಡಿದರು. ಪ್ರಸ್ತುತ ಸರ್ಕಾರದಲ್ಲಿ ಒಂದು ಸಚಿವ ಸ್ಥಾನ ಪಡೆಯಬೇಕಾದರೆ ಕಾಂಗ್ರೆಸ್ ಹೈಕಮಾಂಡ್ ಗೆ ನೂರು ರಿಂದ ನೂರೈವತ್ತು ಕೋಟಿ ರೂಪಾಯಿ ನೀಡಬೇಕಾದ ಪರಿಸ್ಥಿತಿ ಇದೆ. ಈಗ ಬರುತ್ತಿರುವುದು ಪೇಮೆಂಟ್ ಸಚಿವರು ಎಂದು ಅವರು ಲೇವಡಿ ಮಾಡಿದರು. ನಾನೇ ಐದು ವರ್ಷ ಸಿಎಂ ಎಂದಿದ್ದ ಸಿದ್ದರಾಮಯ್ಯ ಈಗ ಎಲ್ಲಿಗೆ ಹೋಗಿದ್ದಾರೆ? ರಾಜ್ಯದಲ್ಲಿ ರೈತರ ಹೋರಾಟ ಹೀಗೆಯೇ ಮುಂದುವರಿದರೆ ಮೂರನೇ ಮುಖ್ಯಮಂತ್ರಿ ಬಂದರೂ ಆಶ್ಚರ್ಯವಿಲ್ಲ ಎಂದು ಭವಿಷ್ಯ ನುಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರಿಗೆ 58 ಲಕ್ಷ ರೂಪಾಯಿ ವಸತಿ ಭತ್ಯೆ ಮತ್ತು ಇತರ ಸೌಲಭ್ಯಗಳಿಗಾಗಿ ಸುಮಾರು 2 ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವುದನ್ನು ಅಶೋಕ್ ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕನಾದ ನನಗೇ ಇನ್ನೂ ಸರ್ಕಾರಿ ನಿವಾಸ ನೀಡಿಲ್ಲ, ಆದರೆ ಸಮಿತಿಯ ಉಪಾಧ್ಯಕ್ಷರಿಗೂ ಸಕಲ ಸೌಲಭ್ಯ ನೀಡಿ ಸರ್ಕಾರಿ ಹಣ ಪೋಲು ಮಾಡಲಾಗುತ್ತಿದೆ. ಸಾಮಾನ್ಯ ಜನರ ಸಂಕಷ್ಟಕ್ಕೆ ಸ್ಪಂದಿಸದ ಈ ಸರ್ಕಾರ ಕೇವಲ ತನ್ನ ಆಪ್ತರಿಗೆ ಸೌಲಭ್ಯ ಹಂಚುವಲ್ಲಿ ಮಗ್ನವಾಗಿದೆ ಎಂದು ಅಶೋಕ್ ಆಕ್ರೋಶ ಹೊರಹಾಕಿದರು.







