ಭಾರತವು ವಿಶ್ವಗುರು ಆಗುತ್ತಿದೆ, ಜಗತ್ತೇ ನಮ್ಮತ್ತ ಬೆರಗು ಕಣ್ಣಿನಿಂದ ನೋಡುತ್ತಿದೆ ಎಂಬ ಮಾತುಗಳು ಕಳೆದ ಹತ್ತು ವರ್ಷಗಳಿಂದ ದೇಶಾದ್ಯಂತ ಮಾರ್ದನಿಸುತ್ತಿವೆ. ಆದರೆ ಈ ರಂಗು ರಂಗಿನ ಘೋಷಣೆಗಳ ನಡುವೆಯೇ ವಾಸ್ತವದ ಕಹಿ ಸತ್ಯವೊಂದನ್ನು ದೇಶದ ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಬಿಚ್ಚಿಟ್ಟಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಅವರು, ವಿಶ್ವಗುರು ಎಂಬ ಹಣೆಪಟ್ಟಿಯನ್ನು ಈಗ ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ಗುಡುಗಿದ್ದಾರೆ.
ಅಯೋಧ್ಯೆಯ ರಾಮನನ್ನೂ ಬಿಡದ ಭ್ರಷ್ಟರು
ಅಯೋಧ್ಯೆಯ ಭವ್ಯ ರಾಮಮಂದಿರದ ನಿರ್ಮಾಣದ ನಂತರ ಇಡೀ ದೇಶವೇ ಸಂಭ್ರಮಿಸಿತ್ತು. ಆದರೆ ಮಂದಿರದ ದೇಣಿಗೆ ಹಣದಲ್ಲಿ ಕಳ್ಳತನ ನಡೆದಿದೆ ಎಂಬ ವರದಿಗಳು ಅನುರಾಧಾ ಪೌಡ್ವಾಲ್ ಅವರನ್ನು ತೀವ್ರವಾಗಿ ಘಾಸಿಗೊಳಿಸಿವೆ. ಈ ಬಗ್ಗೆ ಕಿಡಿಕಾರಿರುವ ಅವರು, ಸ್ವತಃ ರಾಮನೂರಿನಲ್ಲೇ ದೇವರಿಗೆ ಸುರಕ್ಷತೆ ಇಲ್ಲದಂತಾಗಿದೆ. ರಾಮಮಂದಿರದ ಹಣ ಕಳ್ಳತನವಾಗಿರುವುದು ಇಡೀ ಜಗತ್ತಿನ ಎದುರು ಭಾರತೀಯರು ತಲೆ ತಗ್ಗಿಸುವಂತೆ ಮಾಡಿದೆ. ಯಾವ ಊರಲ್ಲಿ ದೇವರಿಗೆ ರಕ್ಷಣೆ ಇಲ್ಲವೋ, ಅಲ್ಲಿ ನಾವು ವಿಶ್ವಗುರು ಎಂದು ಹೇಗೆ ಹೇಳಿಕೊಳ್ಳಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಶಾಲೆಯೇ ಇಲ್ಲದ ನಾಡಿನಲ್ಲಿ ಎಂತಹ ಶಿಕ್ಷಣ?
ಸರ್ಕಾರದ ಶಿಕ್ಷಣ ನೀತಿ ಮತ್ತು ಅಭಿವೃದ್ಧಿಯ ಪುರಾಣಗಳನ್ನು ತರಾಟೆಗೆ ತೆಗೆದುಕೊಂಡಿರುವ ಅನುರಾಧಾ ಪೌಡ್ವಾಲ್, ದೇಶದಲ್ಲಿ ಒಂದು ಕಡೆ ನಾವು ಸುಶಿಕ್ಷಿತರಾಗುತ್ತಿದ್ದೇವೆ ಎಂದು ಜಾಹೀರಾತು ನೀಡಲಾಗುತ್ತಿದೆ, ಆದರೆ ಇನ್ನೊಂದು ಕಡೆ ದೇಶಾದ್ಯಂತ ಈಗಾಗಲೇ 93 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿವೆ. ಮಕ್ಕಳಿಗೆ ಕಲಿಯಲು ಶಾಲೆಯೇ ಇಲ್ಲದ ಮೇಲೆ ಇನ್ನು ಎಂತಹ ವಿಶ್ವಗುರು ಎಂದು ಪ್ರಶ್ನಿಸಿರುವ ಅವರು, ಈ ಅಂಕಿಅಂಶಗಳನ್ನು ನೋಡಿಯಾದರೂ ಸರ್ಕಾರ ಈ ನಾಟಕವನ್ನು ನಿಲ್ಲಿಸಲಿ ಎಂದು ಕಿಡಿಕಾರಿದ್ದಾರೆ.
2047ರ ಕನಸು ಮತ್ತು ಇಂದಿನ ಕರಾಳ ವಾಸ್ತವ
2047ರ ವೇಳೆಗೆ ಭಾರತವು ಸಂಪೂರ್ಣವಾಗಿ ವಿಶ್ವಗುರು ಆಗಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಅನುರಾಧಾ ಪೌಡ್ವಾಲ್ ಕಟುವಾಗಿ ಟೀಕಿಸಿದ್ದಾರೆ. ವಿಶ್ವಗುರು ಆಗಲು ನಮ್ಮಲ್ಲಿ ಸಿದ್ಧವಾಗಿರುವ ವೇದಿಕೆಯಾದರೂ ಯಾವುದು? ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿರುವ ವ್ಯವಸ್ಥೆಯಲ್ಲಿ ಅಯೋಧ್ಯೆಯ ರಾಮನ ಮನೆಗೇ ಕನ್ನ ಬಿದ್ದಿರುವಾಗ ಮುಂದಿನ ಕನಸುಗಳು ಎಷ್ಟು ಸರಿ? ಸರ್ಕಾರದ ಬಳಿ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತಿದ್ದರೆ ನಾವು ಮಾಹಿತಿ ನೀಡುತ್ತೇವೆ, ಆಗಲಾದರೂ ಕ್ರಮ ಜರುಗಿಸುತ್ತೀರಾ ಎಂದು ಅವರು ಸವಾಲು ಹಾಕಿದ್ದಾರೆ.
ಪದ್ಮಶ್ರೀ ಗಾಯಕಿಯ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಕೇವಲ ಹಿಂದಿ ಚಿತ್ರರಂಗಕ್ಕೆ ಸೀಮಿತವಾಗದೆ ಕನ್ನಡದ ಜೀವನದಿ, ಕರಿಯ ಸೇರಿದಂತೆ ಹಲವು ಚಿತ್ರಗಳಲ್ಲಿ ಸುಮಧುರ ಹಾಡುಗಳನ್ನು ಹಾಡಿರುವ ಅನುರಾಧಾ ಪೌಡ್ವಾಲ್ ಅವರನ್ನು ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ. ಭಕ್ತಿಗೀತೆಗಳ ಮೂಲಕ ದೇಶದ ಮನೆಮಾತಾಗಿರುವ ಅವರು ಸದ್ಯ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಕೆಲವರು ಇವರ ಧೈರ್ಯವನ್ನು ಮೆಚ್ಚುತ್ತಿದ್ದರೆ, ಇನ್ನು ಕೆಲವರು ಗಾಯಕಿಯ ಮಾತಿನಿಂದ ಸರ್ಕಾರದ ಇಮೇಜ್‌ಗೆ ಧಕ್ಕೆಯಾಗಿದೆ ಎಂದು ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ವಿಶ್ವಗುರು ಎಂಬ ಹೆಗ್ಗಳಿಕೆಯ ಹಿಂದಿನ ನೈಜ ಸ್ಥಿತಿಯನ್ನು ಅನುರಾಧಾ ಪೌಡ್ವಾಲ್ ಕನ್ನಡಿ ಹಿಡಿದು ತೋರಿಸಿದ್ದಾರೆ.








