ಚಹಾ ಅಂಗಡಿಯವರ ಮಗಳು ಈಗ ಹೆಮ್ಮೆಯ ವಾಯು ಸೇನೆಯ ಪೈಲಟ್
ಮಧ್ಯಪ್ರದೇಶ, ಜೂನ್ 24: 23 ವರ್ಷದ ಆಂಚಲ್ ಗಂಗ್ವಾಲ್ ಅವರು ಶನಿವಾರ ಭಾರತೀಯ ವಾಯುಪಡೆಯ ಅಕಾಡೆಮಿಯಿಂದ ಪದವಿ ಪಡೆದು, ಭಾರತದ ಹೆಮ್ಮೆಯ ವಾಯು ಸೇನೆಯಲ್ಲಿ ಪೈಲಟ್ ಆಗಿ ನೇಮಕಗೊಂಡಿದ್ದಾರೆ.
ಬಡತನದಲ್ಲಿ ಬೆಳೆದು ಬಂದ ಅಂಚಲ್ ಅವರ ತಂದೆ ಸುರೇಶ್ ಗಂಗ್ವಾಲ್ ಅವರು ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಸಣ್ಣ ಚಹಾ ಅಂಗಡಿಯನ್ನು ಹೊಂದಿದ್ದಾರೆ. ಆಂಚಲ್ ಅವರು ಕಂಡಿದ್ದ ಕನಸನ್ನು ನನಸಾಗಿಸಿರುವ ಸಾಧನೆಯ ಹಿಂದೆ ಅವರ ತಂದೆಯ ಕಠಿಣ ಪರಿಶ್ರಮವೂ ಅಡಗಿದೆ. ಮಗಳು ಏರೋನಾಟಿಕಲ್ ಎಂಜಿನಿಯರಿಂಗ್ ಗೆ ಸೇರುತ್ತೇನೆ ಎಂದಾಗ ಅವರ ತಂದೆ ಬಳಿ ಶಿಕ್ಷಣ ಶುಲ್ಕವನ್ನು ಪಾವತಿಸಲು ಸಹ ಹಣವಿರಲಿಲ್ಲ. ಆದರೆ ಸುರೇಶ್ ಗಂಗ್ವಾಲ್ ಮಾತ್ರ ಚಹ ಮಾರುತ್ತಲೇ ಕಷ್ಟ ಪಟ್ಟು ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿ ಪೈಲಟ್ ಮಾಡಿದ್ದಾರೆ.
ಪ್ರಯಾಣದ ನಿರ್ಬಂಧದಿಂದಾಗಿ ಆಂಚಲ್ ಅವರ ಪೋಷಕರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಮಗಳು ವಾಯು ಸೇನೆಯಲ್ಲಿ ಪೈಲಟ್ ಆಗಿ ನೇಮಕಗೊಂಡದನ್ನು ಟಿವಿಯಲ್ಲಿ ನೋಡಿ ಆನಂದಬಾಷ್ಪ ಸುರಿಸಿದ್ದಾರೆ.
ಪದವಿ ಸಮಾರಂಭದಲ್ಲಿ ಆಂಚಲ್ ಗಂಗ್ವಾಲ್ ನಾನು ಪ್ರತಿದಿನ ರಾತ್ರಿ ಈ ದಿನದ ಕನಸು ಕಾಣುತ್ತಿದ್ದೆ. ನಾನು ಇಂದು ಈ ಸಮವಸ್ತ್ರವನ್ನು ಧರಿಸಿ ಇಲ್ಲಿ ನಿಲ್ಲುವಾಗ ನನಗಾಗಿ ಬಹಳಷ್ಟು ತೊಂದರೆಗಳನ್ನು ಎದುರಿಸಿರುವ ನನ್ನ ತಂದೆ ತಾಯಿ ಎದುರು ಇರಬೇಕು ಎಂದು ಬಯಸಿದ್ದೆ. ಆದರೆ ಕೊರೊನಾ ಸಮಯದಿಂದಾಗಿ ಅದು ಸಾಧ್ಯವಾಗಿಲ್ಲ ಎಂದರು.
ಅವರ ತಂದೆ ಮಗಳ ಸಾಧನೆಯ ಬಗ್ಗೆ, ಪೈಲಟ್ ಆಗುವುದು ಮಗಳ ಕನಸಾಗಿತ್ತು. ಅವಳು ವಾಯಸೇನೆಯ ಪೈಲಟ್ ಆಗಿ ನೇಮಕವಾಗಿದ್ದು ನಮಗೆ ತುಂಬಾ ಹೆಮ್ಮೆ ತಂದಿದೆ. ಈ ಸಂತೋಷವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. 2013ರ ಕೇದಾರನಾಥ ಮೇಘಸ್ಪೋಟದ ಅವಘಡದಲ್ಲಿ ಭಾರತೀಯ ವಾಯುಸೇನೆ ನಿರ್ವಹಿಸಿದ ಕಾರ್ಯದಿಂದ ಪ್ರೇರಣೆಗೊಂಡು ಭಾರತೀಯ ವಾಯುಪಡೆಗೆ ಸೇರುವ ಕನಸು ಕಂಡಿದ್ದಳು. ಆದರೆ ಅವಳ ಕನಸನ್ನು ನನಸಾಗಿಸುವುದು ನಮಗೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ಅವಳು ಅದನ್ನು ದೃಢ ಸಂಕಲ್ಪದಿಂದ ಸಾಧಿಸಿ ತೋರಿಸಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಅಂಚಲ್ ಗಂಗ್ವಾಲ್ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಅಂಚಲ್ ಗಂಗ್ವಾಲ್ ಸಾಧನೆ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದೆ. ನೀಮುಚ್‌ನಲ್ಲಿ ಚಹಾ ಅಂಗಡಿಯನ್ನು ಹೊಂದಿರುವ ಸುರೇಶ್ ಗಂಗ್ವಾಲ್ ಅವರ ಪುತ್ರಿ ಅಂಚಲ್ ಈಗ ವಾಯುಸೇನೆಯಲ್ಲಿ ಯುದ್ಧ ವಿಮಾನವನ್ನು ಹಾರಿಸಲಿದ್ದಾರೆ. ಮಧ್ಯಪ್ರದೇಶದ ಹೆಮ್ಮೆಯ ಮಗಳು ಅಂಚಲ್ ಆಕಾಶದ ಎತ್ತರದಲ್ಲಿ ಹಾರಲಿದ್ದಾರೆ.
ಮಧ್ಯಪ್ರದೇಶಕ್ಕೆ ಹೆಮ್ಮೆ ತಂದ ಮಗಳಿಗೆ ಅಭಿನಂದನೆಗಳು, ಆಶೀರ್ವಾದ ಮತ್ತು ಶುಭಾಶಯಗಳು ಎಂದು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.