ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಶಿಕ್ಷಕಿ – ಎಣ್ಣೆ ಕಿಕ್ಕಲ್ಲೇ ಪಾಠ…
ಮದ್ಯಪಾನ ಮಾಡಿಕೊಂಡು ಶಾಲೆಗೆ ಬರುತ್ತಿದ್ದ ಲೇಡಿ ಟೀಚರ್ ಒಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ತುಮಕೂರು ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಚಿಕ್ಕಸಾರಂಗಿ ಪ್ರಾಥಮಿಕ ಶಾಲೆಯಲ್ಲಿ ಇಂಥಹದೊಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಕಳೆದ 25 ವರ್ಷಗಳಿಂದ ಇದೇ ಶಾಲೆಯಲ್ಲಿ ಶಿಕ್ಷಕಿ ಗಂಗಲಕ್ಷ್ಮಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕಳೆದ 5 ವರ್ಷದಿಂದ ಮದ್ಯ ವ್ಯಸನಕ್ಕೆ ದಾಸರಾಗಿದ್ದಾರೆ.
ಕುಡಿದು ಪಾಠ ಮಾಡಿ ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು ಹಾಗೂ ಸಹೋದ್ಯೋಗಿಗಳ ಜೊತೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಮನಗಂಡ ಮಕ್ಕಳ ಪೋಷಕರು ಶಿಕ್ಷಕಿ ಗಂಗಲಕ್ಷ್ಮಮ್ಮಗೆ ತಪ್ಪು ತಿದ್ದಿಕೊಳ್ಳುವಂತೆ ತಿಳಿ ಹೇಳಿದ್ದಾರೆ.
ಆದರೆ ಬುದ್ದಿ ಕಲಿಯದ ಗಂಗಲಕ್ಷ್ಮಮ್ಮ ಅದೇ ಚಾಳಿ ಮುಂದುವರೆಸಿದ್ದಕ್ಕೆ. ಪೋಷಕರು ಬೇಸತ್ತು ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.ಈ ವೇಳೆ ಸ್ಥಳಕ್ಕೆ ಬಿ.ಇ.ಒ ಹನುಮಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಕಿಯ ಟೇಬಲ್‍ನ ಡ್ರಾಯರ್ ಓಪನ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದರು. ಸ್ವತಃ ಬಿಇಒ ಡ್ರಾಯರ್ ಓಪನ್ ಮಾಡಲು ಹೋದಾಗ ಶಿಕ್ಷಕಿ ಪ್ರತಿರೋಧ ಒಡ್ಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟೇಬಲನ್ನು ಹೊರಕ್ಕೆ ತಂದು ಡ್ರಾಯರ್ ಬೀಗ ಮುರಿದಿದ್ದಾರೆ. ಆಗ ಡ್ರಾಯರ್‍ನಲ್ಲಿ ಒಂದು ಫುಲ್ ಮತ್ತು ಎರಡು ಖಾಲಿ ಮದ್ಯದ ಬಾಟಲ್‍ಗಳು ಪತ್ತೆಯಾಗಿದೆ.
ಮದ್ಯದ ಬಾಟಲ್ ಪತ್ತೆಯಾಗುತಿದ್ದಂತೆ ಕೊಠಡಿ ಬೀಗಹಾಕೊಂಡು ಗಂಗ ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾಳೆ. ಬಳಿಕ ಪೊಲೀಸರು ಬಂದು ಮದ್ಯದ ಬಾಟಲನ್ನು ವಶಕ್ಕೆ ಪಡೆದಿದ್ದಾರೆ. ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಎಣ್ಣೆ ಶಿಕ್ಷಕಿ ನಮ್ಮ ಮಕ್ಕಳಿಗೆ ಬೇಡವೇ ಬೇಡವೆಂದು ಪೋಷಕರು ಪಟ್ಟುಹಿಡಿದಿದ್ದಾರೆ.