ಬೆಂಗಳೂರು: ರಾಜ್ಯ ಸರ್ಕಾರವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶಿಕ್ಷಕರಿಗೆ ‘ಶಿಕ್ಷೆ’ಯಾಗಿ ಪರಿಣಮಿಸಿದ್ದು, ಸರ್ಕಾರದ ಅಸಮರ್ಪಕ ಆಯೋಜನೆಯಿಂದಾಗಿ ಶಿಕ್ಷಕರು ಬೇರೆಯವರ ಮನೆ ಬಾಗಿಲಿಗೆ ಹೋಗಿ ಗಂಟೆಗಟ್ಟಲೆ ಕಾಯುವಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ (ಬಿಜೆಪಿ) ರವಿಕುಮಾರ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಮೀಕ್ಷೆಯು ಸರ್ಕಾರದ ಸಮಸ್ಯೆಗಳನ್ನು ಪರಿಹರಿಸುವ ಬದಲು, ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಸರ್ಕಾರವು ಯಾವುದೇ ಸರಿಯಾದ ತರಬೇತಿ ನೀಡದೆ, ಪೂರ್ವಸಿದ್ಧತೆ ಇಲ್ಲದೆ ಶಿಕ್ಷಕರನ್ನು ಸಮೀಕ್ಷೆ ಕಾರ್ಯಕ್ಕೆ ದೂಡಿದೆ ಎಂದು ಆರೋಪಿಸಿದರು.
UHID ಸಂಖ್ಯೆಯ ಗೊಂದಲ, ವಿಳಾಸವೇ ಸಿಗುತ್ತಿಲ್ಲ
ಸಮೀಕ್ಷೆಯ ತಾಂತ್ರಿಕ ದೋಷಗಳನ್ನು ಎತ್ತಿ ಹಿಡಿದ ರವಿಕುಮಾರ್, “ಸಮೀಕ್ಷೆಯಲ್ಲಿ ಬಳಸಲಾಗುತ್ತಿರುವ UHID (Unique Health Identification) ಸಂಖ್ಯೆಯಿಂದ ದೊಡ್ಡ ಗೊಂದಲ ಉಂಟಾಗುತ್ತಿದೆ. ಈ ಸಂಖ್ಯೆಯು ಸರಿಯಾದ ಮನೆಯ ವಿಳಾಸವನ್ನು ತೋರಿಸುತ್ತಿಲ್ಲ. ಇದರಿಂದಾಗಿ, ಸಮೀಕ್ಷೆಗೆ ತೆರಳಿದ ಶಿಕ್ಷಕರು ಸರಿಯಾದ ಮನೆಗಳನ್ನು ಹುಡುಕಲು ಪರದಾಡುತ್ತಿದ್ದಾರೆ. ವಿಳಾಸವಿಲ್ಲದೆ, ತಪ್ಪು ವಿಳಾಸಗಳೊಂದಿಗೆ ಶಿಕ್ಷಕರು ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ,” ಎಂದು ಹೇಳಿದರು.
15 ದಿನವಲ್ಲ, ಒಂದೂವರೆ ತಿಂಗಳಾದರೂ ಮುಗಿಯದು
ಸರ್ಕಾರದ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಅವರು, “ಸರ್ಕಾರವು 15 ದಿನಗಳಲ್ಲಿ ಸಮೀಕ್ಷೆ ಮುಗಿಸುವುದಾಗಿ ಹೇಳುತ್ತಿದೆ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಒಂದೂವರೆ ತಿಂಗಳಾದರೂ ಈ ಕಾರ್ಯ ಪೂರ್ಣಗೊಳ್ಳುವುದಿಲ್ಲ. ಸರ್ಕಾರವು ಸಮೀಕ್ಷೆ ನಡೆಸುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಸಮೀಕ್ಷೆಯು ಶಿಕ್ಷಕರಿಗೆ ಶಿಕ್ಷೆ ನೀಡುವಂತಿದೆ,” ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಮುಖ್ಯಮಂತ್ರಿಗಳು ಮತ್ತು ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ ರವಿಕುಮಾರ್, “ಯಾವುದೇ ಆತುರವಿಲ್ಲದೆ, ಸಮಯ ತೆಗೆದುಕೊಂಡು, ಸರಿಯಾದ ತರಬೇತಿ ನೀಡಿ, ತಾಂತ್ರಿಕ ದೋಷಗಳನ್ನು ಸರಿಪಡಿಸಿ ಸಮೀಕ್ಷೆಯನ್ನು ನಡೆಸಲಿ. ಅಲ್ಲಿಯವರೆಗೂ ಶಿಕ್ಷಕರನ್ನು ಈ ಸಂಕಷ್ಟದಿಂದ ಪಾರುಮಾಡಬೇಕು,” ಎಂದು ಒತ್ತಾಯಿಸಿದರು.








