ಗಾಯದ ಸಮಸ್ಯೆ ಕಾರಣದಿಂದ ಕಳೆದ ಕೆಲವು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ತಂಡಕ್ಕೆ ವಾಪಸ್ಸಾಗುವ ತವಕದಲ್ಲಿದ್ದಾರೆ.
ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್ ಅವರುಗಳು ಗಾಯದ ಸಮಸ್ಯೆಯಿಂದಾಗಿ ಕಳೆದ ಹಲವು ತಿಂಗಳುಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ನಾಲ್ವರು ಆಟಗಾರರು ಇದೀಗ ಮಹತ್ವದ ಪಂದ್ಯಾವಳಿಗೆ ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ತಯಾರಿ ಆರಂಭಿಸಿದ್ದಾರೆ.
ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ತೀವ್ರ ಗಾಯದ ಸಮಸ್ಯೆಯಿಂದ 2022ರ ಸೆಪ್ಟೆಂಬರ್‌ನಿಂದಲೂ ತಂಡದಿಂದ ಹೊರಗುಳಿದಿದ್ದಾರೆ. ಈಗಾಗಲೇ 2022ರಲ್ಲಿ ನಡೆದ ಟಿ20 ವಿಶ್ವಕಪ್, ಪ್ರಸಕ್ತ ವರ್ಷದಲ್ಲಿ ನಡೆದ ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿರುವ ಬುಮ್ರಾ ತಂಡಕ್ಕೆ ಮರಳುವ ಬಗ್ಗೆ ಸಾಕಷ್ಟು ನಿರೀಕ್ಷೆ ಎದುರಾಗಿದೆ. ಇದಕ್ಕಾಗಿ ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿರುವ ಸ್ಟಾರ್ ವೇಗದ ಬೌಲರ್, ಮುಂಬರುವ ಏಷ್ಯಾಕಪ್ ವೇಳೆಗೆ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಷಿದೆ.
ಪ್ರಸಕ್ತ ವರ್ಷದ ಐಪಿಎಲ್ ಆರಂಭಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸಹ ಕಮ್ ಬ್ಯಾಕ್ ಹಾದಿಯಲ್ಲಿದ್ದಾರೆ. ಪ್ರಸಕ್ತ ವರ್ಷದ ಆರಂಭದಲ್ಲಿ ನಡೆದ ಕೆಲವು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಯ್ಯರ್, ನಂತರದಲ್ಲಿ ಗಾಯದ ಸಮಸ್ಯೆಗೆ ಸಿಲುಕಿದರು. ಹೀಗಾಗಿ ಐಪಿಎಲ್ ಸೇರಿದಂತೆ ಹಲವು ಪಂದ್ಯಾವಳಿಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಕೂಡ ತಂಡಕ್ಕೆ ಮರಳುವ ಲೆಕ್ಕಾಚಾರ ಹೊಂದಿದ್ದು, ಇದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.
ಇವರೊಂದಿಗೆ ಭಾರತದ ತಂಡದ ಆರಂಭಿಕ ಬ್ಯಾಟರ್ ಆಗಿ ಮಿಂಚಿದ್ದ ಕನ್ನಡಿಗ ಕೆಎಲ್ ರಾಹುಲ್ ಸಹ ತಂಡಕ್ಕೆ ಮರಳುವ ಉತ್ಸಾಹದಲ್ಲಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಗಾಯಗೊಂಡು ಟೂರ್ನಿಯ ಕೊನೆ ಹಂತದಲ್ಲಿ ಹೊರಗುಳಿದಿದ್ದ ರಾಹುಲ್, ಬಳಿಕ ಯುಕೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಇದೀಗ ಬೆಂಗಳೂರಿಗೆ ಹಿಂದಿರುಗಿರುವ ಕನ್ನಡಿಗ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ್ದು, ಆಗಸ್ಟ್ ಅಂತ್ಯದಲ್ಲಿ ನಡೆಯುವ ಏಷ್ಯಾಕಪ್ ವೇಳೆಗೆ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಿದ್ದಾರೆ.
ಇನ್ನೂ ಕಳೆದ ವರ್ಷಾಂತ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಡದಿಂದ ಹೊರಗುಳಿದಿರುವ ರಿಷಭ್ ಪಂತ್ ಸಹ ಕಮ್‌ಬ್ಯಾಕ್ ಹಾದಿಯಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್‌ಮನ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಏಷ್ಯಾಕಪ್ ಟೂರ್ನಿ ವೇಳೆಗೆ ಪಂತ್ ಗುಣಮುಖ ಹೊಂದುವ ಸಾಧ್ಯತೆ ಕಡಿಮೆ ಇದ್ದರೂ, ಮುಂಬರುವ ವಿಶ್ವಕಪ್ ವೇಳೆಗೆ ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಮರಳುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದಾರೆ. ಬಿಸಿಸಿಐ ಸಹ ಪಂತ್ ಅವರನ್ನ ಏಕದಿನ ವಿಶ್ವಕಪ್‌ನಲ್ಲಿ ಆಡಿಸುವ ನಿರೀಕ್ಷೆಯಲ್ಲಿದೆ.








