ತೆಲಂಗಾಣ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಟಿ. ಪದ್ಮರಾವ್ ಗೆ ಕೊರೊನಾ ಸೋಂಕು
ಹೈದರಾಬಾದ್, ಜುಲೈ 1: ತೆಲಂಗಾಣ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಟಿ. ಪದ್ಮರಾವ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಿಂಕರಾಬಾದ್ ಕ್ಷೇತ್ರದ ಶಾಸಕರಾದ ಟಿ. ಪದ್ಮರಾವ್ ಮತ್ತು ಅವರ ಐವರು ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಕುಟುಂಬ ಸದಸ್ಯರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಟಿ. ಪದ್ಮರಾವ್ ಅವರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ.
ಟಿ. ಪದ್ಮರಾವ್ ಅವರು ತಮ್ಮ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಇದ್ದು, ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ, ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು.
ತೆಲಂಗಾಣದ ಟಿಆರ್‌ಎಸ್ ಪಕ್ಷದ ಐದು ಶಾಸಕರಿಗೆ ಇದುವರೆಗೆ ಕೊರೊನಾ ಸೋಂಕು ತಗುಲಿದ್ದು, ರಾಜ್ಯದ ಗೃಹ ಸಚಿವರಿಗೆ ಭಾನುವಾರ ರಾತ್ರಿ ಸೋಂಕು ತಗುಲಿರುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಮಹಮೂದ್ ಅಲಿ, ಜ್ಯುಬ್ಲಿ ಹಿಲ್ಸ್‌ನಲ್ಲಿರುವ ಆಸ್ಪತ್ರೆಗೆ ಭಾನುವಾರ ರಾತ್ರಿ ದಾಖಲಾಗಿದ್ದರು.