ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸಿಎಂ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಬಂಧಿತ ವ್ಯಕ್ತಿ ಅಧಿಕಾರಿಗಳಿಗೆ ವಂಚಿಸುತ್ತಿದ್ದ. ಸದ್ಯ ಈ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ
ಬಂಧಿತ ಆರೋಪಿಯನ್ನು ತುಮಕೂರು ಮೂಲದ ರಘುನಾಥ್ ಎಂದು ಗುರುತಿಸಲಾಗಿದೆ. ಆರೋಪಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ವರ್ಗಾವಣೆ ಮಾಡಿಸಿಕೊಡುವುದಾಗಿ ಆಮಿಷವೊಡ್ಡಿ ಹಣ (Money) ಪಡೆದು ವಂಚಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಕೇವಲ ಡಿಸಿಎ ಹೆಸರು ಅಷ್ಟೇ ಅಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಹೇಳಿಕೊಂಡು ಕೂಡ ವಂಚಿಸಿದ್ದಾನೆ ಎನ್ನಲಾಗಿದೆ. ರಘುನಾಥ್ ಇಂಜಿನಿಯರ್ ಒಬ್ಬರಿಗೆ ಕರೆ ಮಾಡಿ ವರ್ಗಾವಣೆ ಮಾಡಿಸಿಕೊಡುವುದಾಗಿ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಆರೋಪಿಯ ಮಾತು ನಂಬಿದ್ದ ಇಂಜಿನಿಯರ್ 80 ಸಾವಿರ ರೂ. ಹಣ ನೀಡಿದ್ದರು. ಆನಂತರ ಮೋಸ ಹೋಗಿರುವುದು ಗೊತ್ತಾಗಿ, ವಂಚನೆ ಕುರಿತು ಸಚಿವರ ಆಪ್ತ ಕಾರ್ಯದರ್ಶಿ ದೂರು ನೀಡಿದ್ದರು. ಸದ್ಯ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸತ್ತಿದ್ದಾರೆ.