ಶಿವಮೊಗ್ಗ : ಜಿಲ್ಲೆಯಲ್ಲಿ ಮತ್ತೆ ಉದ್ವಿಗ್ನದ ಪರಿಸ್ಥಿತಿ ಉಂಟಾಗಿದ್ದು, ಈದ್ ಮಿಲಾದ್ (Eid Milad Procession) ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ.
ಹೀಗಾಗಿ ನಗರದಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಈ ಘಟನೆ ರಾಗಿಗುಡ್ಡದಲ್ಲಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಗುಂಪು ಚದುರಿಸಿದ್ದಾರೆ. ಮೆರವಣಿಗೆ ವೇಳೆ ಎರಡು ಕೋಮುಗಳಿಂದ ಪರಸ್ಪರ ಕಲ್ಲು ತೂರಾಟ ನಡೆದಿದೆ ಎಂದು ತಿಳಿದು ಬಂದಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓಮಿನಿ ಕಾರು ಮತ್ತು ಮೂರು ಬೈಕ್ ಗಳು ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಗಾಂಧಿ ಬಜಾರಿನ ಜಾಮಿಯಾ ಮಸೀದಿಯಿಂದ ಮುಸ್ಲಿಂ ಸಮಾಜದವರು ಮೆರವಣಿಗೆ ನಡೆಸುತ್ತಿದ್ದರು. ಹೀಗಾಗಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಿದ್ದರು. ಈ ವಿಚಾರವಾಗಿ ಗೊಂದಲ ಸೃಷ್ಟಿಯಾಗಿತ್ತು. ಪರಿಣಾಮವಾಗಿ ಸ್ಥಳದಲ್ಲಿ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಗುರುವಾರ ಈದ್ ಮಿಲಾದ್ ಹಬ್ಬ ನಡೆದಿತ್ತು. ಗುರುವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು ಈದ್ ಮಿಲಾದ್ ಮೆರವಣಿಗೆಯನ್ನು ಮುಂದೂಡಿದ್ದರು. ಹೀಗಾಗಿ ಪ್ರಮುಖ ನಗರಗಳಲ್ಲಿ ಮೆರವಣಿಗೆ ನಡೆಯುತ್ತಿತ್ತು. ಸದ್ಯ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.