ವಿಜಯಪುರ: ಸರ್ಕಾರಿ ಬಸ್ ಗಳ ಮಧ್ಯೆ ಭೀಕರ ಅಪಘಾತವೊಂದು ನಡೆದಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮದಭಾವಿ ಕ್ರಾಸ್ ಹತ್ತಿರ ನಡೆದಿದ್ದು, 10ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಂದಗಿಯಿಂದ ವಿಜಯಪುರಕ್ಕೆ ಬರುತ್ತಿದ್ದ ಬಸ್ ಹಾಗೂ ವಿಜಯಪುರದಿಂದ ಸಿಂದಗಿಗೆ ತೆರಳುತ್ತಿದ್ದ ಬಸ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದಾಗಿ ಈ ಅವಘಡ ಸಂಭವಿಸಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಎರಡೂ ಬಸ್ ಗಳ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಮುಂದೆ ಇದ್ದವರಿಗೆ ಹೆಚ್ಚಿನ ಪೆಟ್ಟಾಗಿವೆ ಎನ್ನಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








