ಲಾರಿಗಳ ಮಧ್ಯೆ ಭೀಕರ ಅಪಘಾತ | ಬೆಂಕಿಗಾಹುತಿಯಾದ ಲಾರಿಗಳು
ದೇವನಹಳ್ಳಿ: ಎರಡು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ, ಬೆಂಕಿಯ ಕೆನ್ನಾಲಿಗೆ ಚಾಲಕ ಬಲಿಯಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಆವತಿ ಬಳಿಯ ಬುಕ್ತಿ ಡಾಬಾ ಮುಂಭಾಗ ನಡೆದಿದೆ.
ಗುರುವಾರ ರಾತ್ರಿ 10 ಗಂಟೆ ಘಟನೆ ಸಂಭವಿಸಿದ್ದು, ಚಾಲಕ ವಸಂತಕುಮಾರ್ (28) ಮೃತಪಟ್ಟಿದ್ದಾರೆ. ಸಿಮೆಂಟ್ ತುಂಬಿದ್ದ ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಚಾಲಕ ಲಾರಿಯಿಂದ ಹೊರ ಬರಲಾಗದೇ ಸುಟ್ಟು ಕರಕಲಾದರೆ, ಮತ್ತೊಬ್ಬ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾನೆ. ಘಟನೆ ಸಂಭಂದ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಚಾಲಕನನ್ನು ವಸಂತಕುಮಾರ್ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಗೊಟ್ಲಾಪಲ್ಲಿಯ ನಿವಾಸಿಯಾಗಿದ್ದು, ಈತ ಆಂಧ್ರ ಮೂಲದ ಜಮ್ಮಲ್ಲಮಡಗುವಿನ ಡಾಲ್ಮಿ ಎಂಬ ಕಂಪನಿಯಲ್ಲಿ ಚಾಲಕನಾಗಿದ್ದ. ಮತ್ತೊಂದು ಲಾರಿ ಚಾಲಕ ವೇಲು ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಅಪಘಾತವಾದ ಎರಡು ಲಾರಿಗಳು ಆಂಧ್ರದಿಂದ ಸಿಮೆಂಟ್ ತುಂಬಿಕೊಂಡು ಹೊರಟಿದ್ದವು. ಒಂದು ಲಾರಿ ಮೈಸೂರಿಗೆ, ಮತ್ತೊಂದು ಬೆಂಗಳೂರಿನ ವೈಟ್ ಫೀಲ್ಡ್ ಕಡೆಗೆ ಹೋಗುತ್ತಿರುವಾಗ ಚಾಲಕ ವಸಂತಕುಮಾರ್ ಎಡ ಬದಿಯಿಂದ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಮುಂದೆ ಹೋಗುತಿದ್ದ ಲಾರಿಗೆ ಗುದ್ದಿದ್ದಾನೆ.
ಗುದ್ದಿದ ರಭಸಕ್ಕೆ ಮುಂದಿನ ಲಾರಿಯು ರಸ್ತೆ ವಿಭಜಕ ದಾಟಿ ಪಲ್ಟಿ ಹೊಡೆದು ಚಿಕ್ಕಬಳ್ಳಾಪುರಕ್ಕೆ ತೆರಳುವ ಮಾರ್ಗದಲ್ಲಿ ಬಿದ್ದಿದೆ. ಈ ಸಂದರ್ಭದಲ್ಲಿ ಚಾಲಕ ವೇಲು ಮುಂಬದಿಯ ಗ್ಲಾಸ್ ಒಡೆದುಕೊಂಡು ರಸ್ತೆ ಮೇಲೆ ಬಿದ್ದಿದ್ದು, ಅದನ್ನು ಕಂಡ ತಕ್ಷಣ ಸ್ಥಳದಲ್ಲಿದ್ದ ಜನರು ಆತನನ್ನು ರಕ್ಷಿಸಿದ್ದಾರೆ.
ಇತ್ತ ಹಿಂಬದಿಯಿಂದ ಗುದ್ದಿದ ಲಾರಿಯು ನಿಯಂತ್ರಣ ಸಿಗದೇ ಮುಂಬದಿ ಜಖಂಗೊಂಡು ವಿಭಜಕದ ಮೇಲೆ ನಿಂತಿತ್ತು. ಆದರೆ ಘರ್ಷಣೆಯ ರಭಸಕ್ಕೆ ಎರಡೂ ಲಾರಿಗಳು ಬೆಂಕಿ ಹೊತ್ತಿಕೊಂಡು ಉರಿದಿವೆ. ಜಖಂ ಆದ ಲಾರಿಯಲ್ಲಿ ಚಾಲಕ ವಸಂತಕುಮಾರ್ ಹೊರಬರಲಾರದೇ, ಬೆಂಕಿಯಲ್ಲೇ ಬೆಂದು ಹೋಗಿದ್ದಾನೆ.
ಬೆಂಕಿ ತೀವ್ರಗತಿಯಲ್ಲಿದ್ದ ಕಾರಣ ಸಾರ್ವಜನಿಕರಿಗೂ ಕೂಡ ಸಿಕ್ಕಿಹಾಕಿಕೊಂಡ ಚಾಲಕನನ್ನು ತಕ್ಷಣ ಹೊರತೆಗೆಯಲು ಆಗಲಿಲ್ಲ. ಲಾರಿ ಪಲ್ಟಿ ಆಗಿದ್ದರಿಂದ ರಸ್ತೆಯಲ್ಲಿ ಸಿಮೆಂಟ್ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೂಡಲೇ ಸ್ಥಳಿಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿ, ಮುಂದೆ ಆಗಬಹುದಾದ ಅನಾಹುತ ತಪ್ಪಿಸಿದ್ದಾರೆ.