ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲೀಸ್ ಭೀಕರ ಕಾಡ್ಗಿಚ್ಚು ಹೊತ್ತಿಕೊಂಡು ತೀವ್ರ ನಷ್ಟ ಉಂಟಾಗಿದೆ.
ಮುಗಿಲೆತ್ತರಕ್ಕೆ ಜ್ವಾಲೆ ಚಿಮ್ಮುತ್ತಿದ್ದು, ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ.
ಇಲ್ಲಿಯವರೆಗೆ ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. 1500ಕ್ಕೂ ಅಧಿಕ ಮನೆಗಳು ಸುಟ್ಟು ಭಸ್ಮವಾಗಿವೆ. ಸುಮಾರು 10 ಸಾವಿರಕ್ಕೂ ಅಧಿಕ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಲಾಸ್ ಏಂಜಲೀಸ್‌ನಾದ್ಯಂತ ನಿಯಂತ್ರಣ ಮೀರಿದ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿರುವುದರಿಂದ, ಸನ್‌ಸೆಟ್ ಫೈರ್ ಎಂದು ಕರೆಯಲ್ಪಡುವ ಹೊಸ ಜ್ವಾಲೆಯು ಹಾಲಿವುಡ್ ಹಿಲ್ಸ್‌ನಲ್ಲಿ ಕಾಣಿಸಿಕೊಂಡಿದೆ. 112 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ʻಸಾಂಟಾ ಅನಾʼ ಚಂಡಮಾರುತದಿಂದ ಪರಿಸ್ಥಿತಿ ಹದಗೆಡುತ್ತಲೇ ಇದೆ.
ಹಾಲಿವುಡ್ ಬೌಲೆವಾರ್ಡ್‌ನಿಂದ 100 ಮೀಟರ್ ದೂರದಲ್ಲಿ ಕಾಡ್ಗಿಚ್ಚು ವ್ಯಾಪಿಸಿದ್ದು, ಐತಿಹಾಸಿಕ ಹಾಲಿವುಡ್‌ನ ಹೃದಯಭಾಗದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಬುಧವಾರವೇ ಆದೇಶ ನೀಡಲಾಗಿದೆ.
1,500 ಕಟ್ಟಡಗಳು ಸುಟ್ಟು ಹೋಗಿದ್ದು, 1 ಲಕ್ಷ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಆದೇಶಿಸಿದ್ದಾರೆ. ನೈಸರ್ಗಿಕ ವಿಕೋಪವು ಪೆಸಿಫಿಕ್ ಪಾಲಿಸೇಡ್ಸ್ ಮತ್ತು ಮಾಲಿಬುವಿನಂತಹ ಐಷಾರಾಮಿ ಪ್ರದೇಶಗಳ ಮೇಲೂ ಪರಿಣಾಮ ಬೀರಿದೆ.
ಒರೆಗಾನ್, ವಾಷಿಂಗ್ಟನ್ ಮತ್ತು ಉತಾಹ್ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಅಗ್ನಿಶಾಮಕ ದಳದ ಸಿಬ್ಬಂದಿ ಕಾಡ್ಗಿಚ್ಚು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ನೀರಿನ ಅಭಾವದಿಂದಾಗಿ ಅಗ್ನಿಶಾಮಕ ದಳದವರು ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಸುತ್ತಲಿನ ಈಜುಕೊಳಗಳು ಮತ್ತು ಕೊಳಗಳಿಂದ ನೀರು ಸಂಗ್ರಹಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಪತ್ತು ಘೋಷಣೆಗೆ ಸಹಿ ಹಾಕಿದ್ದಾರೆ.