ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಕಸ್ಟಡಿಯನ್ನು ಆ.20 ರ ವರೆಗೆ ವಿಸ್ತರಿಸಿ ಗುರುವಾರ ರೂಸ್ ಅವೆನ್ಯೂ ನ್ಯಾಯಾಲಯ ಆದೇಶ ಹೊರಡಿಸಿದೆ. ಹೀಗಾಗಿ ದೆಹಲಿ ಸಿಎಂ ಇನ್ನೂ ಹಲವು ದಿನ ಜೈಲಿನಲ್ಲಿಯೇ ಇರಬೇಕಾದ ಸ್ಥಿತಿ ಬಂದೋದಗಿದೆ.
ಅರವಿಂದ್ ಕೇಜ್ರಿವಾಲ್ ಅವರ ಕಸ್ಟಡಿ ಅವಧಿ ಗುರುವಾರ ಅಂತ್ಯವಾದ ಹಿನ್ನೆಲೆಯಲ್ಲಿ ತಿಹಾರ್ ಜೈಲಿನಿಂದ (Tihar Jail) ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಜ್ರಿವಾಲ್ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಸಿಎಂ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಕೇಜ್ರಿವಾಲ್ ಅವರನ್ನು ಸಮರ್ಥನೀಯ ಕಾರಣವಿಲ್ಲದೆ ಬಂಧಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಿಎಂ ಕೇಜ್ರಿವಾಲ್‌ಗೆ ನೀಡಲಾದ ಜಾಮೀನು ರದ್ದುಗೊಳಿಸುವಂತೆ ಮಾಡಿದ ಮನವಿಯನ್ನು ಪರಿಹರಿಸಲು ಅಲ್ಪಾವಧಿಯ ಮುಂದೂಡಿಕೆ ಕೋರಲಾಗಿದೆ. ಈ ಎಲ್ಲ ವಿಷಯಗಳ ಮಧ್ಯೆ ಕೇಜ್ರಿವಾಲ್ ಇನ್ನೂ ಕೆಲವು ದಿನ ಜೈಲಿನಲ್ಲಿಯೇ ಕಳೆಯಬೇಕಾದ ಸ್ಥಿತಿ ಬಂದೋದಗಿದೆ.