ಆಡಳಿತ ನೆಲಕಚ್ಚಿದೆ.. ಭ್ರಷ್ಟಾಚಾರ ಮುಗಿಲು ಮುಟ್ಟಿದೆ : ಡಿಕೆಶಿ
ಬಾಗಲಕೋಟೆ : ಬಿಜೆಪಿ ಸರ್ಕಾರದಲ್ಲಿ ಆಡಳಿತ ನೆಲಕಚ್ಚಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಜನ ಬದಲಾವಣೆ ಬಯಸಿದ್ದಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಏನು ಬೇಕಾದರೂ ಆಗಬಹುದು. ಬಿಜೆಪಿ ಸರ್ಕಾರದಲ್ಲಿ ಆಡಳಿತ ನೆಲಕಚ್ಚಿದೆ.
ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಜನ ಬದಲಾವಣೆ ಬಯಸಿದ್ದಾರೆ. ಅದನ್ನು ಹೇಗೆ ನಾವು ಬಳಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ.
ಪ್ರತಿಯೊಬ್ಬ ನಾಯಕರು ಬೇರೆ ಪಕ್ಷಗಳಿಂದ ಬೇಷರತ್ತಾಗಿ ಬರುವವರನ್ನು ಕಾಂಗ್ರೆಸ್ ಗೆ ಸೇರಿಸಬೇಕು. ಇದಕ್ಕಾಗಿ ಸರಣಿ ಸಭೆಗಳು ನಡೆಯಬೇಕು ಎಂದು ಹೇಳಿದರು.
ಇದೇ ವೇಳೆ ಸ್ವಪಕ್ಷದಲ್ಲಿರುವವರ ಬಗ್ಗೆ ಕಿಡಿಕಾರಿದ ಡಿ.ಕೆ.ಶಿವಕುಮಾರ್, ರಾಜ್ಯಮಟ್ಟದಲ್ಲಿ ದೊಡ್ಡ ನಾಯಕರು ಎಂದು ತೋರಿಸಕೊಳ್ಳುವ ಬಹಳಷ್ಟು ಮಂದಿ ಸ್ವ ಕ್ಷೇತ್ರದ ಗ್ರಾಮಪಂಚಾಯ್ತಿಯಲ್ಲೂ ಬಹುಮತ ಕೊಡಿಸಿರುವುದಿಲ್ಲ.
ಅಂಥವರು ವೇದಿಕೆಯ ಮೇಲಿರಲು ನಾಲಾಯಕ್ ಗಳು. ವೇದಿಕೆ ಮೇಲೆ ಕುಳಿತುಕೊಳ್ಳುವ ನಾಯಕರಿಂದ ಕಾಂಗ್ರೆಸ್ ಗೆ ಏನು ಲಾಭ ಕೇಳಿಕೊಳ್ಳಬೇಕು.
ಅವರು ಎಷ್ಟು ಮಂದಿ ನಾಯಕರನ್ನು ಪಕ್ಷಕ್ಕೆ ಕರೆತಂದಿದ್ದಾರೆ, ಎಷ್ಟು ಜನ ಸೇರಿಸಿದ್ದಾರೆ, ಎಷ್ಟು ಮನೆಗಳಿಗೆ ಭೇಟಿ ನೀಡುತ್ತಾರೆ ಎಂಬುದು ಮುಖ್ಯ ಎಂದು ಬಿಸಿ ಮುಟ್ಟಿಸಿದರು.