ಗುಜರಾತ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, ಇಬ್ಬರ ಸಾವು 15 ಮಂದಿ ಗಾಯ
ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು 15 ಕಾರ್ಮಿಕರು ಗಾಯಗೊಂಡಿರುವ ಘಟನೆ ಗುಜರಾತ್ ರಾಜ್ಯದ ಪಂಚಮಹಲ್ಸ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಘೋಘಂಬಾ ತಾಲೂಕಿನ ರಂಜಿತ್‌ನಗರ ಗ್ರಾಮದ ಬಳಿ ಇರುವ ಗುಜರಾತ್ ಫ್ಲೋರೋಕೆಮಿಕಲ್ಸ್ ಲಿಮಿಟೆಡ್‌ನ (ಜಿಎಫ್‌ಎಲ್) ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಕಚೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಜಿಲ್ಲಾಡಳಿತವು ಮುಖ್ಯಮಂತ್ರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಪಟೇಲ್ ಅವರ ಕಚೇರಿ ಹೇಳಿಕೆ ನೀಡಿದೆ. ಸುಮಾರು 10 ಕಿಮೀ ದೂರದವರೆಗೆ ಭಾರೀ ಸ್ಫೋಟದ ಶಬ್ದವು ಕೇಳಿಸಿದೆ ಎಂದು ಪಂಚಮಹಲ್ ಜಿಲ್ಲ್ಲೆಯ ಜಿಲ್ಲಾ ಕೇಂದ್ರವಾದ ಗೋಧ್ರಾದಲ್ಲಿನ ಅಧಿಕಾರಿಗಳು ಹೇಳಿದ್ದಾರೆ
ಗೋಧ್ರಾ, ಹಾಲೋಲ್ ಮತ್ತು ಕಾಲೋಲ್ ನಗರಗಳಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಐದು ಗಂಟೆಗಳಿಗೂ ಹೆಚ್ಚು ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.ಅಗ್ನಿ ಶಾಮಕ ದಳದವರು ಬದುಕುಳಿದವರು ಮತ್ತು ಗಾಯಗೊಂಡವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪಂಚಮಹಲ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ತಿಳಿಸಿದ್ದಾರೆ. ಸಧ್ಯ “ಬೆಂಕಿ ನಿಯಂತ್ರಣದಲ್ಲಿದೆ” ಎಂದು ಅಧಿಕಾರಿ ಹೇಳಿದರು.