ನವದೆಹಲಿ: ಮದುವೆಯ ಸಂಭ್ರಮದಲ್ಲಿದ್ದ ವರ(Groom) ಆಮಂತ್ರಣ (Wedding Invitation) ಪತ್ರಿಕೆ ಹಂಚಲು ತೆರಳಿದ್ದ ಸಂದರ್ಭದಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಈ ಘಟನೆ ಘಾಜಿಪುರದ (Ghazipur) ಬಾಬಾ ಬ್ಯಾಂಕ್ವೆಟ್ ಹಾಲ್ ಹತ್ತಿರ ನಡೆದಿದೆ. ಗ್ರೇಟರ್ ನೋಯ್ಡಾದ ನಿವಾಸಿ ಅನಿಲ್ ಮೃತ ವರ. ಅನಿಲ್ ಶನಿವಾರ ಮಧ್ಯಾಹ್ನ ಆಮಂತ್ರಣ ಪತ್ರಿಕೆ ಹಂಚಲು ಹೊರಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
ರಾತ್ರಿ ವೇಳೆ ಅನಿಲ್ ಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಕರೆ ಮಾಡಿದ್ದರು ಎನ್ನಲಾಗಿದೆ. ಆದರೆ, ಕುಟುಂಬಸ್ಥರು ಸ್ಥಳಕ್ಕೆ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕಾರಿಗೆ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುವುದು ಗೊತ್ತಾಗಿಲ್ಲ. ಅನಿಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








