ಕೊಪ್ಪಳ: ಪಂಚ ಯೋಜನೆಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಪಂಚಗಳಿಗೆ ಕಾಂಚಾಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಕಸರತ್ತು ನಡೆಸಿದೆ. ವಿವಿಧ ಮೂಲಗಳಿಂದ ಹಣ ಹೊಂದಿಸಿ ಗ್ಯಾರಂಟಿಗೆ ಹಾಕಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷ ಬಿಜೆಪಿ ಆರೋಪಿಸುತ್ತಿರುವ ಮಧ್ಯೆಯೇ ಇದು ನಿಜ ಎಂದು ಸ್ವತಃ ಸಿಎಂ ಆರ್ಥಿಕ ಸಲಹೆಗಾರರೇ ಹೇಳಿದ್ದಾರೆ.
ಆರ್ಥಿಕ ಸಮಸ್ಯೆ ಆಗಿರುವುದನ್ನು ಶಾಸಕ ಬಸವರಾಜ್ ರಾಯರೆಡ್ಡಿ ಅವರೇ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಅನುದಾನವನ್ನು ಗ್ಯಾರಂಟಿ ಯೋಜನೆಗಳು ಮುಚ್ಚಿ ಬಿಟ್ಟಿವೆ. ಸಾಕಷ್ಟು ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಹಣ ಕೇಳುತ್ತಿದ್ದಾರೆ. ಆದರೆ, ಹಣವಿಲ್ಲ ಎಂದು ಹೇಳಿದ್ದಾರೆ. ಪ್ರತಿ ವರ್ಷ ಆರವತ್ತರಿಂದ ಆರವತ್ತೈದು ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ಬೇಕಾಗುತ್ತದೆ. ಹೀಗಾಗಿ ಅಭಿವೃದ್ಧಿ ಕಾರ್ಯ ಎಲ್ಲಿಂದ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅನೇಕರು ಕೆಲಸ ಮಾಡಬೇಕು ಅಂತ ಅಂದುಕೊಂಡರೂ ಅನುದಾನ ಸಿಗುತ್ತಿಲ್ಲ. ನನಗೆ ಅನುದಾನ ಸಿಕ್ಕಿದೆ. ನಾನು ಸಿಎಂ ಆರ್ಥಿಕ ಸಲಹೆಗಾರ ಆಗಿರುವುದಿರಂದ ಪ್ರತಿದಿನ ಸಿಎಂ ಜೊತೆ ಇರುವುದರಿಂದ ನನಗೆ ಮಾತ್ರ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಸಿಕ್ಕಿದೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿಯಾಗುತ್ತಿಲ್ಲ ಎಂದು ವಿಪಕ್ಷಗಳು ವಾಗ್ದಾಳಿ ನಡೆಸುತ್ತಲೇ ಬಂದಿವೆ. ಜನರಿಗೆ ಎಲ್ಲಾ ಉಚಿತವಾಗಿ ಕೊಟ್ಟು ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಲಾಗುತ್ತಿದೆ. ಅಲ್ಲದೇ ವಿವಿಧ ಇಲಾಖೆಯ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಡುವ ಅನುದಾನವನ್ನು ಈ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಶಾಸಕರಿಗೂ ಅನುದಾನ ನೀಡುತ್ತಿಲ್ಲ ಎಂದು ವಿಪಕ್ಷಗಲು ಮುಗಿ ಬಿದ್ದ ಸಂದರ್ಭದಲ್ಲಿಯೇ ಬಸವರಾಜ ರಾಯರೆಡ್ಡಿ ಸತ್ಯ ಹೇಳಿದ್ದು, ಇದು ಎಲ್ಲಿಗೆ ಹೋಗಿ ಮುಟ್ಟತ್ತದೆ ನೋಡಬೇಕಿದೆ.