ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಮನೆ ಸಂಪೂರ್ಣವಾಗಿ ಹಾನಿಯಾಗಿದೆ.
ಈ ಘಟನೆ ಜಿಲ್ಲೆಯ ಮುನ್ಸಿಪಾಲ್ ಕಾಲೇಜಿನ ಮುಂಭಾಗದಲ್ಲಿನ ಫರ್ಜಾನಾ ಎಂಬುವವರ ಮನೆಯಲ್ಲಿ ನಡೆದಿದೆ. ಫರ್ಜಾನಾ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಮಗ ರಫೀಕ್ (4) ಹಾಗೂ ಮಗಳು ಹರ್ಷಿಯಾ ಭಾನು (16) ಇದ್ದರು. ಈ ಸಂದರ್ಭದಲ್ಲಿ ಗ್ಯಾಸ್ ವಾಸನೆ ಬರುತ್ತಿದೆ ಎಂದು ಪಕ್ಕದ ಮನೆಯ ಹೇಮಾವತಿ (18) ಬಂದಿದ್ದಾರೆ. ಆ ಸಂದರ್ಭದಲ್ಲಿ ಕೂಡಲೇ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ.
ಘಟನೆಯಲ್ಲಿ ಮೂವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರಿಗೂ 35 ರಿಂದ 40% ಸುಟ್ಟ ಗಾಯಗಳಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.