ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಗಣ್ಯರ ಸಂತಾಪ Saaksha Tv
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಲತಾ ಜಿ ಅವರ ನಿಧನವು ನನ್ನು ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ನೋವು ತಂದಿದೆ. ಅವರ ವಿಶಾಲ ಶ್ರೇಣಿಯ ಹಾಡುಗಳಲ್ಲಿ, ಭಾರತದ ಸಾರ ಮತ್ತು ಸೌಂದರ್ಯವನ್ನು ನಿರೂಪಿಸಿದೆ. ಮುಂದಿನ ತಲೆಮಾರುಗಳು ತಮ್ಮ ಆಂತರಿಕ ಭಾವನೆಗಳ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಸಹಕಾರಿಯಾಗುವಂತಹ ಹಾಡುಗಳಾಗಿವೆ. ಭಾರತ ರತ್ನ, ಲತಾ ಮಂಗೇಶ್ಕರ್ ಅವರ ಸಾಧನೆಗಳು ಎಂದಿಗೂ ಅಚ್ಚಳಿಯದೇ ಉಳಿಯುತ್ತವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ವ್ಯಕ್ತಪಡಿಸಿದರು.
ಲತಾ ದೀದಿಯವರಿಂದ ನಾನು ಯಾವಾಗಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ. ಇದು ನನ್ನ ಸೌಭಾಗ್ಯವೆಂದೆ ಅಂದುಕೊಳ್ಳುತ್ತೇನೆ. ಅವರೊಂದಿಗಿನ ನನ್ನ ಸಂವಾದಗಳು ಎಂದಿಗೂ ಅವಿಸ್ಮರಣೀಯವಾಗಿ ಉಳಿಯುತ್ತವೆ. ಲತಾ ದೀದಿ ಅವರ ನಿಧನಕ್ಕೆ ಇಡೀ ದೇಶದ ಜೊತೆಗೆ ನಾನು ಸಹ ದುಃಖಿಸುತ್ತೇನೆ. ಲತಾ ಮಂಗೇಶ್ಕರ ಸಾವಿನ ಕುರಿತು ಕುಟುಂಬದವರೊಂದಿಗೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಲತಾ ಮಂಗೇಶ್ಕರ್ ಅವರು ಹಲವು ದಶಕಗಳಿಂದ ಭಾರತದ ಅತ್ಯಂತ ಪ್ರೀತಿಯ ಧ್ವನಿಯಾಗಿ ಉಳಿದರು. ಅವರ ಚಿನ್ನದ ಧ್ವನಿಯು ಅಮರವಾಗಿದೆ ಮತ್ತು ಅವರ ಅಭಿಮಾನಿಗಳ ಹೃದಯದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂತಾಪ ಸೂಚಿಸಿದರು.
ಲತಾ ಮಂಗೇಶ್ಕರ್ ಅವರ ಹಾಡುಗಳು ಕೇವಲ ಸಿನಿಮಾಕ್ಕೆ ಸೀಮಿತವಾಗಿರಲಿಲ್ಲ,ಭಜನೆಗಳು, ದೇಶಭಕ್ತಿ ಗೀತೆಗಳು, ದೇವರ ಗೀತೆಗಳನ್ನು ಹಾಡಿದ್ದಾರೆ. .ಯೇ ಮೇರೆ ವತನ್ ಕಿ ಲೋಗೋ ಹಾಡು ಇವತ್ತಿಗೂ ಕೇಳಿದ್ರೆ ದೇಶಭಕ್ತಿ ಉಕ್ಕಿಹರಿಯುತ್ತೆ. ಈ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ. ಲತಾ ಮಂಗೇಶ್ಕರ್ ಕನ್ನಡದಲ್ಲೂ ಹಾಡನ್ನು ಹಾಡಿದ್ದಾರೆ. ಅವರಿಗೆ ಕನ್ನಡದ ನಂಟೂ ಇತ್ತು ಇವರ ಅಗಲಿಕೆಯಿಂದ ನಮ್ಮೆಲ್ಲರಿಗೂ ಅಪಾರ ದು:ಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ ಗಾನಕೋಗಿಲೆ ಲತಾ ಮಂಗೇಶ್ಕರ್ ಸಾವು ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಆಘಾತಕ್ಕೀಡು ಮಾಡಿದೆ. ನಮ್ಮನ್ನು ಅಗಲಿ ಹೋದರೂ ಅವರ ಕಂಠ ಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವೆ ಎಂದು ಬರೆದುಕೊಂಡಿದ್ದಾರೆ.
ಗಾನ ಕೋಗಿಲೆಯ ಅಗಲಿಕೆಗೆ ರಾಷ್ಟ್ರ,ರಾಜ್ಯ ನಾಯಕರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಗಲಿಕೆಯಿಂದ ಗಾನ ಲೋಕಕ್ಕೆ ತಂಬಲಾರದ ನಷ್ಟವಾಗಿದೆ.