ಪ್ರಧಾನಿ ಮೋದಿ ಕಾರ್ಯ ವೈಖರಿಗೆ ಜೈ ಎಂದ ದೇಶವಾಸಿಗಳು
ಹೊಸದಿಲ್ಲಿ, ಅಗಸ್ಟ್ 8: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭೂತ ಪೂರ್ವ ವಿಜಯ ಸಾಧಿಸಿದ ಒಂದು ವರ್ಷದ ನಂತರವೂ ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಹೊರ ಹಾಕಿದ್ದಾರೆ ಎಂದು ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಕಂಡುಬಂದಿದೆ.
ದೇಶಾದ್ಯಂತ ಸಮೀಕ್ಷೆ ನಡೆಸಿದ ಒಟ್ಟು 12,021 ಜನರಲ್ಲಿ ಶೇಕಡಾ 78 ರಷ್ಟು ಜನರು ಪಿಎಂ ಮೋದಿಯವರ ಸಾಧನೆ ಅತ್ಯುತ್ತಮ / ಉತ್ತಮವೆಂದು ವ್ಯಕ್ತಪಡಿಸಿದರೆ . ಕೇವಲ ಶೇಕಡಾ 5 ರಷ್ಟು ಜನರು ಮಾತ್ರ ಸರ್ಕಾರದ ಕಾರ್ಯಕ್ಷಮತೆ ಕಳಪೆಯಾಗಿರುವುದು ಎಂದು ತಿಳಿಸಿದ್ದಾರೆ. ಪಿಎಂ ಮೋದಿ ಹಿಂದೂ ಸಮುದಾಯದಲ್ಲಿ ಹೆಚ್ಚು ಜನಪ್ರಿಯರಾಗಿದ್ದು 4 ಪಾಯಿಂಟ್ ನಲ್ಲಿ ಸರಾಸರಿ 3.13 ರಷ್ಟಿದೆ.
ಮತ್ತೊಂದೆಡೆ, ಹಿಂದೂಯೇತರರಲ್ಲಿ (ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತರು) ಸರಾಸರಿ ಅಂಕಗಳು ಕಡಿಮೆ ಇದ್ದರೂ ಕೂಡ ಮುಸ್ಲಿಂ ಎಂದು ಪ್ರತಿಕ್ರಿಯಿಸಿದವರು ಪ್ರಧಾನಿ ಮೋದಿಯವರ ಸಾಧನೆಯನ್ನು 4 ಪಾಯಿಂಟ್ ನಲ್ಲಿ ಸರಾಸರಿ 2.33 ರೊಂದಿಗೆ ರೇಟ್ ಮಾಡಿರುವುದು ವಿಶೇಷವಾಗಿದೆ.
ಇನ್ನು ಜಾತಿ ಲೆಕ್ಕಾಚಾರದಲ್ಲಿ ವಿಶ್ಲೇಷಿಸಿದಾಗ, 4 ಪಾಯಿಂಟ್ ನಲ್ಲಿ ಪಿಎಂ ಮೋದಿ ಅವರು ಒಬಿಸಿ / ಎಂಬಿಸಿ ಸಮುದಾಯದಲ್ಲಿ (3.08) ಹೆಚ್ಚು ಜನಪ್ರಿಯರಾಗಿದ್ದಾರೆ ನಂತರ ಎಸ್ಸಿ / ಎಸ್ಟಿ ಸಮುದಾಯ (3.01) ಮತ್ತು ಮೇಲ್ಜಾತಿಯವರು (2.99) ಕ್ರಮವಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತವು ಕೊರೋನವೈರಸ್ ಸಾಂಕ್ರಾಮಿಕದ ಉಭಯ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜೊತೆಗೆ ಚೀನಾದೊಂದಿಗೆ ಗಡಿ ಉದ್ವಿಗ್ನತೆ ಹೆಚ್ಚಾಗಿರುವ ಸಮಯದಲ್ಲಿ ಪ್ರಧಾನಮಂತ್ರಿಯವರ ಮೇಲೆ ಮೂಡಿರುವ ದೇಶಿಗರ ವಿಶ್ವಾಸ ಮುಂದಿನ ದಿನಗಳಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದುನೋಡಬೇಕಿದೆ.
ಏತನ್ಮಧ್ಯ ರಾಹುಲ್ ಗಾಂಧಿಗೆ ಪ್ರಮುಖವಾಗಿ ರಾಷ್ಟ್ರೀಯ ಭದ್ರತೆಯ ವಿಷಯದ ಮೇಲೆ ಮೋದಿ ಸರ್ಕಾರದ ಮೇಲೆ ದಾಳಿ ಮಾಡಬಾರದು ಎಂಬ ಅಭಿಪ್ರಾಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಇನ್ನು ಕೆಲವರು ರಾಹುಲ್ ಗಾಂಧಿ ಆಧಾರರಹಿತ ಆರೋಪಗಳ ಮೂಲಕ ಪ್ರಚಾರ ಪಡೆಯಲು ಸರ್ಕಾರವನ್ನು ಟೀಕಿಸಿದ್ದಾರೆ ಎಂದು ಹೇಳಿದ್ದರೆ, ಕೋವಿಡ್ -19 ಅನ್ನು ನಿಗ್ರಹಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಶೇಕಡಾ 25 ರಷ್ಟು ಭಾರತೀಯರು ಭಾವಿಸಿದ್ದಾರೆ
ಕಾಂಗ್ರೆಸ್ ವಿರೋಧ ಪಕ್ಷವಾಗಿ ಕುಂಠಿತಗೊಳ್ಳುತ್ತಲೇ ಇದ್ದು, 21 ಪ್ರತಿಶತದಷ್ಟು ಜನರು ಅದನ್ನು ‘ಕಳಪೆ’ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಶೇಕಡಾ 44 ರಷ್ಟು ಜನರು ತೃಪ್ತರಾಗಿದ್ದಾರೆ.
ಫೆಬ್ರವರಿ 2016 ಮತ್ತು ಆಗಸ್ಟ್ 2020 ರ ನಡುವೆ ನಡೆಸಿದ 10 ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಸಮೀಕ್ಷೆಗಳ ಮಾಹಿತಿಯ ಹೋಲಿಕೆ ಮಾಡಿದಾಗ ಇದೀಗ ಮೋದಿ ಹೆಚ್ಚು ಜನಪ್ರಿಯ ನಾಯಕನಾಗಿ ಹೊರ ಹೊಮ್ಮಿದ್ದಾರೆ.
ಒಟ್ಟಿನಲ್ಲಿ ಮೋದಿಗೆ ಜನ ಸಾಮಾನ್ಯರು ಜೈ ಎನ್ನುವ ಮೂಲಕ ಅವರ ಕಾರ್ಯವೈಖರಿಗೆ ಸೈ ಎಂದಿದ್ದಾರೆ .