ಅರ್ಚಕರ ಮಕ್ಕಳಿಗೆ ಸಚಿವ ವಿ. ಸೋಮಣ್ಣ ಸಾಂತ್ವನ .. ಶೋಧ ಕಾರ್ಯಕ್ಕೆ ದಟ್ಟ ಮಂಜು ಅಡ್ಡಿ
ಬ್ರಹ್ಮಗಿರಿ ಬೆಟ್ಟ ಭೂಕುಸಿತದಿಂದ ಭೂ ಸಮಾಧಿಯಾಗಿರುವ ಅರ್ಚಕ ನಾರಾಯಣಚಾರ್ಯ ಅವರ ಪುತ್ರಿಯರು
ಆಸ್ಟ್ರೇಲಿಯಾದಿಂದ ಆಗಮಿಸಿದ್ದಾರೆ. ತಮ್ಮ ತವರು ನೆಲಕ್ಕೆ ಕಾಲಿಟ್ಟಾಗ ಅಲ್ಲಿನ ಪರಿಸ್ಥಿತಿ ನೋಡಿ ಆಘಾತಕ್ಕೊಳಗಾದ್ರು. ಅಪ್ಪ ಅಮ್ಮ -ದೊಡ್ಡಪ್ಪ ಭೂ ಸಮಾಧಿಯಾಗಿದ್ದಾರೆ. ಇನ್ನು ತಾವು ಹುಟ್ಟಿ ಬೆಳೆದ ಮನೆ ಮತ್ತು ಅಂಗಳ ಯಾವುದು ಕೂಡ ಅಲ್ಲಿ ಇರಲಿಲ್ಲ. ಸಂಪೂರ್ಣ ಮಣ್ಣಿನಿಂದ ಅವೃತ್ತಿಯಾಗಿತ್ತು. ತಮ್ಮ ಮನೆ ಎಂಬುದಕ್ಕೆ ಸಣ್ಣ ಕುರುಹು ಕೂಡ ಅಲ್ಲಿರಲಿಲ್ಲ.
ಅಪ್ಪ – ಅಮ್ಮನನ್ನು ನೆನೆದು ಕಣ್ಣೀರಿಟ್ಟ ಪುತ್ರಿಯರಿಗೆ ಸಚಿವ ಸೋಮಣ್ಣ ಸಾಂತ್ವನ ಹೇಳಿದ್ದಾರೆ. ಮೃತ ದೇಹಗಳನ್ನು ತೆಗೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶೋಧ ಕಾರ್ಯದ ಎಲ್ಲಾ ಮಾಹಿತಿಗಳನ್ನು ಸಚಿವರು ಅರ್ಚಕರ ಪುತ್ರಿಯರಿಗೆ ತಿಳಿಸಿದ್ರು. ಇದಕ್ಕೆ ಪ್ರತಿಯಾಗಿ ಅರ್ಚಕರ ಪುತ್ರಿಯರು ಧನ್ಯವಾದ ಹೇಳಿದ್ದಾರೆ.
ಶೋಧ ಕಾರ್ಯದ ವೇಳೆ ಮನೆಯ ಕೆಲವೊಂದು ವಸ್ತುಗಳು, ಪುಸ್ತಕಗಳು ಪತ್ತೆಯಾಗಿವೆ. ನಿನ್ನೆ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದಾಗಿ ಶೋಧ ಕಾರ್ಯಕ್ಕೆ ತೊಂದರೆಯಾಗಿದ್ರೆ, ಇಂದು ಮಳೆ ನಿಂತಿದ್ರೂ ದಟ್ಟ ಮಂಜಿನಿಂದಾಗಿ ಶೋಧ ಕಾರ್ಯ ವಿಳಂಬವಾಗುತ್ತಿದೆ. ಆದ್ರೂ ಸಂಜೆಯ ವೇಳೆ ಮೃತ ದೇಹಗಳು ಪತ್ತೆಯಾಗಬಹುದು ಎಂಬ ನಿರೀಕ್ಷೆ ಇದೆ.
ಇನ್ನೊಂದೆಡೆ ಅರ್ಚಕ ನಾರಾಯಣಚಾರ್ ಅವರ ಪುತ್ರಿಯರಿಗೆ ಮತ್ತೊಂದು ಆಘಾತವನ್ನುಂಟು ಮಾಡಿದೆ. ಅರ್ಚಕರ ಮಕ್ಕಳನ್ನು ಕಾರಿನಲ್ಲಿ ಬಂದಿದ್ದು, ಇದೀಗ ಕಾರಿನ ಡ್ರೈವರ್‍ಗೆ ಕೊರೋನಾ ಸೋಂಕಿದೆ ಎಂಬ ಸುದ್ದಿಯೂ ಬರುತ್ತಿದೆ. ಮೊದಲೇ ಅಪ್ಪ – ಅಮ್ಮನನ್ನು ಕಳೆದುಕೊಂಡಿರುವ ದುಃಖ ಮತ್ತೊಂದೆಡೆ ಕೊರೋನಾ ಭಯ. ಹೀಗೆ ಪ್ರಕೃತಿಯ ಮುನಿಸಿಗೆ ನಾರಾಯಣಾಚಾರ್ ಅವರ ಕುಟುಂಬ ತತ್ತರಿಸಿ ಹೋಗಿದೆ.
ಇನ್ನು ಅರ್ಚಕರ ಮನೆಯಲ್ಲಿ ಸುಮಾರು 10 ಕ್ವಿಂಟಾಲ್ ಕಾಳು ಮೆಣಸು ಹಾಗೂ ಐದು ಕ್ವಿಂಟಾಲ್ ಏಲಕ್ಕಿ ಮೂಟೆಗಳಿದ್ದವು ಎಂದು ಅವರ ಕಾರಿನ ಡ್ರೈವರ್ ಮಾಹಿತಿ ನೀಡಿದ್ದಾರೆ.