ನನ್ನ ಹೃದಯದ ಕನಸು ಈಡೇರಿದೆ – ಭೂಮಿ ಪೂಜೆಯ ಮೊದಲ ದಿನ ಅಡ್ವಾಣಿಯವರ ಮನದಾಳದ ಮಾತು
ಹೊಸದಿಲ್ಲಿ, ಅಗಸ್ಟ್ 5: ರಾಮ ಮಂದಿರದ ಭೂಮಿ ಪೂಜೆ ಸಮಾರಂಭವು ಎಲ್ಲಾ ಭಾರತೀಯರಿಗೂ ಐತಿಹಾಸಿಕ ಮತ್ತು ಭಾವನಾತ್ಮಕ ದಿನವಾಗಿದೆ ಎಂದು ರಾಮ ಜನ್ಮಭೂಮಿ ಚಳವಳಿಯ ಪ್ರಮುಖ ವಾಸ್ತುಶಿಲ್ಪಿ ಮಾಜಿ ಉಪ ಪ್ರಧಾನಿ ಮತ್ತು ಬಿಜೆಪಿ ಪಿತಾಮಹ ಎಲ್.ಕೆ.ಅಡ್ವಾಣಿ ಮಂಗಳವಾರ ಹೇಳಿದ್ದಾರೆ.
ಕೊರೋನಾ ಸೋಂಕು ಎಲ್ಲೆಡೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಅಡ್ವಾಣಿ ಅವರು ತಮ್ಮ ಇಳಿ ವಯಸ್ಸಿನ ಕಾರಣದಿಂದಾಗಿ ಇಂದು ಅಯೋಧ್ಯೆಯಲ್ಲಿ ನಡೆಯಲಿರುವ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವುದಿಲ್ಲ.

ಪಿಎಂ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವುದು ನನ್ನ ಪಾಲಿಗೆ ಮಾತ್ರವಲ್ಲದೇ ಇಡೀ ದೇಶದ ಜನರಿಗೆ ಐತಿಹಾಸಿಕ ಮತ್ತು ಭಾವನಾತ್ಮಕ ದಿನವಾಗಿದೆ ಎಂದು ಅಡ್ವಾಣಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನನ್ನ ಬಹು ದಿನದ ಹೃದಯದ ಕನಸು ಈಡೇರಿದೆ. 1990 ರಲ್ಲಿ ರಾಮ ಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ, ಸೋಮನಾಥದಿಂದ ಅಯೋಧ್ಯೆಯವರೆಗೆ ರಥ ಯಾತ್ರೆಯ ರೂಪದಲ್ಲಿ ನಾನು ಪ್ರಮುಖ ಕರ್ತವ್ಯವನ್ನು ನಿರ್ವಹಿಸಿದಕ್ಕೆ ವಿನಮ್ರನಾಗಿದ್ದೇನೆ ಎಂದು ಅವರು ಹೇಳಿದರು.
ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನಿಗೆ ಭವ್ಯವಾದ ಮಂದಿರವು ಬಿಜೆಪಿಯ ಆಸೆ ಮತ್ತು ಧ್ಯೇಯವಾಗಿತ್ತು ಎಂದ ಅವರು ಈ ಶುಭ ಸಂದರ್ಭದಲ್ಲಿ, ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಸಂತರು, ಮುಖಂಡರು ಮತ್ತು ಜನರಿಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಅವರು ರಾಮ ಜನ್ಮಭೂಮಿ ಚಳವಳಿಯಲ್ಲಿ ಅಮೂಲ್ಯವಾದ ಕೊಡುಗೆಗಳನ್ನು ಮತ್ತು ತ್ಯಾಗಗಳನ್ನು ಮಾಡಿದ್ದಾರೆ ಎಂದು ಅಡ್ವಾಣಿ ಹೇಳಿದರು.

2019 ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ನಿರ್ಣಾಯಕ ತೀರ್ಪಿನಿಂದಾಗಿ, ಶ್ರೀ ರಾಮ್ ಮಂದಿರ ನಿರ್ಮಾಣವು ಶಾಂತಿಯುತವಾಗಿ ಪ್ರಾರಂಭವಾಗುತ್ತಿರುವುದು ನನಗೆ ತುಂಬಾ ಸಂತೋಷ ನೀಡಿದೆ. ಇದು ಭಾರತೀಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ. ಶ್ರೀ ರಾಮನಿಗೆ ಭಾರತದ ಸಾಂಸ್ಕೃತಿಕ ಮತ್ತು ನಾಗರಿಕ ಪರಂಪರೆಯಲ್ಲಿ ಗೌರವಾನ್ವಿತ ಸ್ಥಾನವಿದೆ. ಈ ರಾಮಮಂದಿರವು ಎಲ್ಲಾ ಭಾರತೀಯರಿಗೆ ಅವರ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಲಿ ಎಂದು ಅವರು ಹೇಳಿದರು.








