ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ತಂದೆಯೇ ಜಿಮ್ ಟ್ರೈನರ್ ನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಈ ಘಟನೆ ದೆಹಲಿಯಲ್ಲಿ ನಡೆದಿದೆ. 29 ವರ್ಷ ವಯಸ್ಸಿನ ಜಿಮ್ ಟ್ರೈನರ್ನನ್ನು ದಕ್ಷಿಣ ದೆಹಲಿಯಲ್ಲಿರುವ ಮನೆಯಲ್ಲಿ ಮದುವೆಗೂ ಕೆಲವೇ ಗಂಟೆಗಳ ಮೊದಲು ಅವರ ಎದೆಗೆ 15 ಬಾರಿ ಇರಿಯಲಾಗಿದೆ. ಸದ್ಯ ಆರೋಪಿ ತಂದೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೃತ ಗೌರವ್ ಸಿಂಘಾಲ್ ಅವರ ಕಿರಿಯ ಸಹೋದರ ಮತ್ತು ಸಂಬಂಧಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಆದರೆ, ಮಗನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತಂದೆ ಮತ್ತು ಮಗನ ನಡುವೆ ವೈಮನಸ್ಸು ಇತ್ತು ಎಂದು ಮಾತ್ರ ಪೊಲೀಸರು ಹೇಳಿದ್ದಾರೆ.
ಹಲ್ಲೆ ನಂತರ ಸಿಂಘಾಲ್ ಅವರ ಕುಟುಂಬ ಸದಸ್ಯರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಅವರು ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ. ಸಿಂಘಾಲ್ ಮುಖಕ್ಕೆ ಮತ್ತು ಎದೆಗೆ 15ಕ್ಕೂ ಹೆಚ್ಚು ಬಾರಿ ಇರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೌರವ್ ಗೆ ವಿವಾಹವಾಗಲು ಇಷ್ಟವಿರಲಿಲ್ಲ, ಆದರೆ ಆತನ ತಂದೆ ಒತ್ತಡ ಹೇರುತ್ತಿದ್ದರು ಎಂಬುದು ಪ್ರಕರಣದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಿಂಘಾಲ್ ಬೇರೆ ಮಹಿಳೆಯನ್ನು ಪ್ರೀತಿಸುತ್ತಿದ್ದರು. ಅವಳನ್ನೇ ಮದುವೆಯಾಗಲು ಬಯಸಿದ್ದರು ಎನ್ನಲಾಗಿದೆ.