ಮಗುವನ್ನು ತಿಂಗಳಾದರೂ ನೋಡಲು ಬಾರದ ತಂದೆಗಾಗಿ ಕಾಯುತ್ತಿರುವ ತಾಯಿ
ಕಳೆದ ಒಂದು ತಿಂಗಳಿಂದ ಕಂದನನ್ನು ಒಬ್ಬಳೇ ನೋಡಿಕೊಳ್ಳುತ್ತಿರೋ ಸಂತ್ರಸ್ತ ಯುವತಿ, ಮಗುವಿನ ತಂದೆ ಮತ್ತು ಅವರ ಕುಟುಂಬದವರು ಬಂದು ಮಗುವನ್ನು ನೋಡಲಿ ಎಂದು ಕಾಯುತ್ತಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಮಗ ಕೃಷ್ಣ ಜೆ. ರಾವ್ ಯುವತಿಗೆ ಮದುವೆಯಾಗುವ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದರು. ಇದರಿಂದ ಯುವತಿ ಗರ್ಭಿಣಿಯಾಗಿದ್ದಳು. ಆದರೆ, ನಂತರ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿ ಪೋಲಿಸ್ ದೂರು ದಾಖಲಿಸಿದ್ದರು.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಜೆ. ರಾವ್ ಮತ್ತು ಅವರ ತಂದೆ ಜಗನ್ನಿವಾಸ್ ರಾವ್ ಇಬ್ಬರೂ ಜೈಲಿನಲ್ಲಿದ್ದಾರೆ. ಇತ್ತ, ಒಂದು ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ ಯುವತಿ, ತಾನು ಒಬ್ಬಳೇ ಕಂದನನ್ನು ನೋಡಿಕೊಳ್ಳುತ್ತಿರುವುದಾಗಿ ನೋವಿನಿಂದ ಹೇಳಿದ್ದಾರೆ. ಮಗುವಿನ ತಂದೆ ಮತ್ತು ಅವರ ಕುಟುಂಬದವರು ಇನ್ನೂ ಮಗುವನ್ನು ನೋಡಲು ಬಂದಿಲ್ಲ. ‘ಅವರು ಮಾಡಿರುವ ತಪ್ಪಿಗೆ ಮಗುವಿಗೆ ಯಾಕೆ ಶಿಕ್ಷೆ ಕೊಡಬೇಕು?’ ಎಂದು ಯುವತಿ ಪ್ರಶ್ನಿಸಿದ್ದಾರೆ.
ಯುವತಿ ಕೃಷ್ಣ ಜೆ. ರಾವ್ ಅವರ ಮನೆಗೆ ಹೋದಾಗ ಅವರ ಕುಟುಂಬದ ಸದಸ್ಯರು ಒರಟಾಗಿ ಮಾತನಾಡಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಮಗು ಅಲ್ಲಿ ಇದ್ದರೂ ಕೂಡ ಅದನ್ನು ನೋಡಲಿಲ್ಲ. ಇದಲ್ಲದೇ, ಯುವತಿ ತಮ್ಮ ಮನೆಗೆ ಬರುತ್ತಿರುವುದು ತಿಳಿದ ಕೂಡಲೇ, ಯುವತಿಯನ್ನು ಒಳಗೆ ಬಿಡದಂತೆ ಮನೆಯಲ್ಲಿನ ಸದಸ್ಯರಿಗೆ ಕೃಷ್ಣ ಜೆ. ರಾವ್ ಹೇಳಿದ್ದರು ಎಂದು ತಿಳಿದುಬಂದಿದೆ. ಇದರಿಂದ ಯುವತಿ ಮತ್ತು ಅವರ ತಾಯಿ ತುಂಬ ನೋವು ಅನುಭವಿಸಿರುವುದಾಗಿ ಹೇಳಿದ್ದಾರೆ.
ಕೃಷ್ಣ ಜೆ. ರಾವ್ ಮತ್ತು ಯುವತಿಯ ನಡುವಿನ ಸಂಬಂಧ
ಈ ಪ್ರಕರಣದ ಕುರಿತು ಹೇಳುವುದಾದರೆ, ಕೃಷ್ಣ ಮತ್ತು ಯುವತಿಯ ಪರಿಚಯ ಹೈಸ್ಕೂಲ್ನಲ್ಲಿ ಆಗಿತ್ತು. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಕೃಷ್ಣ ಮದುವೆಯಾಗುವ ಭರವಸೆ ನೀಡಿ ಹಲವು ಬಾರಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಕೃಷ್ಣ ಇಂಜಿನಿಯರಿಂಗ್ ಓದುತ್ತಿದ್ದರು. 2024ರ ಅಕ್ಟೋಬರ್ 11ರಂದು ಕೃಷ್ಣ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು. ನಂತರ 2025ರ ಜನವರಿಯಲ್ಲಿ ಪುನಃ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರು. ನಂತರ ಯುವತಿ ಗರ್ಭಿಣಿಯಾದಾಗ ಮದುವೆಯಾಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪರವಾಗಿ ನಿಂತ ಬಿಜೆಪಿ
ಈ ಬಗ್ಗೆ ದೂರು ದಾಖಲಾದ ನಂತರ ಕೃಷ್ಣ ಜೆ. ರಾವ್ ನಾಪತ್ತೆಯಾಗಿದ್ದರು. ಬಳಿಕ ಮೈಸೂರಿನಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದಡಿ ಕೃಷ್ಣ ಜೆ. ರಾವ್ ಅವರ ತಂದೆ ಜಗನ್ನಿವಾಸ್ ರಾವ್ ಅವರನ್ನು ಕೂಡ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಪರಿವಾರ ಸಂಘಟನೆ ಯುವತಿಯ ಪರವಾಗಿ ನಿಲ್ಲುವುದಾಗಿ ಸ್ಪಷ್ಟಪಡಿಸಿದೆ. ಈ ಕುರಿತು ತನಿಖೆ ನಡೆಯುತ್ತಿದೆ.








