ಗ್ಲೆನ್ಮಾರ್ಕ್ ಫಾರ್ಮಾ ಕೋವಿಡ್ -19 ಔಷಧಿ ಮಾತ್ರೆಯ ಬೆಲೆ 75 ರೂ ಮಾತ್ರ
ಹೊಸದಿಲ್ಲಿ, ಜುಲೈ 14: ಔಷಧ ಸಂಸ್ಥೆ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಸೋಮವಾರ ತನ್ನ ಆಂಟಿವೈರಲ್ ಔಷಧಿ ಫವಿಪಿರಾವೀರ್ನ ಬೆಲೆಯನ್ನು ಕಡಿತಗೊಳಿಸಿದೆ ಎಂದು ತಿಳಿಸಿದೆ.
ಫ್ಯಾಬಿಫ್ಲೂ ಎಂಬ ಬ್ರಾಂಡ್ ಹೆಸರಿನಲ್ಲಿ, ಸೌಮ್ಯದಿಂದ ಮಧ್ಯಮ ಪ್ರಮಾಣದ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಬಳಸುವ ಮಾತ್ರೆಯ ಬೆಲೆಯನ್ನು 75 ರೂಗೆ ಕಡಿತಗೊಳಿಸಲಾಗಿದೆ.
ಕೊವಿಡ್ 19 ಸೋಂಕಿತರು ಬಾಯಿ ಮೂಲಕ ಸೇವಿಸಬಹುದಾದ ಈ ಔಷಧಿಯಲ್ಲಿ ಇಲ್ಲಿಯವರೆಗೆ ಇದನ್ನು ಬಳಸಿದವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಕಳೆದ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಗೆ ಈ ಔಷಧಿ ಬಿಡುಗಡೆಯಾದಾಗ ಪ್ರತಿ ಮಾತ್ರೆಯ ಬೆಲೆ 103 ಎಂದು ನಿಗದಿ ಪಡಿಸಲಾಗಿತ್ತು.
ನಮ್ಮ ಆಂತರಿಕ ಸಂಶೋಧನೆಯು ನಾವು ಫ್ಯಾಬಿಫ್ಲೂವನ್ನು ಭಾರತದಲ್ಲಿ ಕಡಿಮೆ ಮಾರುಕಟ್ಟೆ ವೆಚ್ಚದಲ್ಲಿ ಪ್ರಾರಂಭಿಸಿದ್ದೇವೆ ಎಂದು ತೋರಿಸುತ್ತದೆ. ಅದು ಅನುಮೋದನೆ ಪಡೆದ ಇತರ ದೇಶಗಳಲ್ಲಿನ ಫವಿಪಿರಾವೀರ್ ವೆಚ್ಚಕ್ಕೆ ಹೋಲಿಸಿದರೆ, ಈಗ ಮತ್ತಷ್ಟು ಬೆಲೆ ಕಡಿತಗೊಳಿಸಲಾಗಿದೆ. ದೇಶಾದ್ಯಂತದ ರೋಗಿಗಳಿಗೆ ಇನ್ನಷ್ಟು ನೆರವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಹಿರಿಯ ಉಪಾಧ್ಯಕ್ಷ ಮತ್ತು ಭಾರತದ ಮುಖ್ಯ ವ್ಯವಹಾರ ಅಲೋಕ್ ಮಲಿಕ್ ಹೇಳಿದ್ದಾರೆ.
ಜಪಾನ್ ನ ಫ್ಯೂಜಿಫಿಲಂ ಹೋಲ್ಡಿಂಗ್ಸ್ ಕಾರ್ಪ್ ಸಂಸ್ಥೆ ಅವಿಗಾನ್ ಹೆಸರಿನಲ್ಲಿ ಫವಿಪಿರಾವೀರ್ ಹೊರ ತಂದಿದ್ದು, ಜುಲೈ ವೇಳೆಗೆ ಸಂಪೂರ್ಣವಾಗಿ ಕೊವಿಡ್ 19 ತೊಲಗಿಸುವ ಡ್ರಗ್ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
2014ರಲ್ಲಿ ಜಪಾನಿಯರು ಅವಿಫಾವಿರ್ ಮಾತ್ರೆಯನ್ನು ಕಂಡು ಹಿಡಿದು ಜ್ವರ ನಿವಾರಣೆಗಾಗಿ ಬಳಸತೊಡಗಿದ್ದರು. ಅಂದಿನಿಂದ ಇಲ್ಲಿಯವರೆಗೆ ಕೊವಿಡ್-19 ರೋಗಿಗಳ ವೈದ್ಯಕೀಯ ಪ್ರಯೋಗದಲ್ಲಿ ಬಳಕೆಗೆ ಸುರಕ್ಷಿತ ಹಾಗೂ ತ್ವರಿತಗತಿಯಲ್ಲಿ ಟ್ರಯಲ್ ಮುಗಿಸಬಹುದು ಎಂದು ಜಪಾನಿ ತಜ್ಞರು ಸೂಚನೆ ನೀಡಿದ ಬಳಿಕ ರಷ್ಯನ್ನರು ಟ್ರಯಲ್ ಆರಂಭಿಸಿದಾರೆ. ರಷ್ಯಾ ಹಾಗೂ ಜಪಾನ್ ಜಂಟಿ ಸಹಯೋಗದಲ್ಲಿ ಕೊವಿಡ್ 19ಗೆ ಈ ಡ್ರಗ್ ಹೇಗೆ ಉಪಯುಕ್ತ ಎಂಬುದರ ಬಗ್ಗೆ ಸಂಶೋಧನೆ ಮತ್ತು ಟ್ರಯಲ್ ಅನ್ನು ನಡೆಸುತ್ತಿದ್ದಾರೆ.
ಗ್ಲೆನ್ ಮಾರ್ಕ್ ಸಂಸ್ಥೆಯು ಫಾವಿಪಿರಾವಿರ್ ಆಧಾರಿತ ಫಾಬಿಫ್ಲೂ ಔಷಧಿಯು ಈಗಾಗಲೇ 3 ಹಂತದ ಕ್ಲಿನಿಕಲ್ ಟ್ರಯಲ್ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ಮಧ್ಯಮ ಲಕ್ಷಣಗಳಿರುವ ವಯಸ್ಕ ಕೋವಿಡ್-19 ರೋಗಿಗಳಲ್ಲಿ ಸಂಯೋಜನೆಯ ಚಿಕಿತ್ಸೆಯಾಗಿ ಎರಡು ಆಂಟಿವೈರಲ್ಗಳ ಔಷಧಿಗಳಾದ ಫವಿಪಿರಾವಿರ್ ಮತ್ತು ಉಮಿಫೆನೊವಿರ್ನ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಗ್ಲೆನ್ಮಾರ್ಕ್ ಮತ್ತೊಂದು ಹಂತ 3 ಕ್ಲಿನಿಕಲ್ ಪ್ರಯೋಗವನ್ನು ನಡೆಸುತ್ತಿದೆ.