ಭುವನೇಶ್ವರ: ಒಡಿಸ್ಸಾ ರಾಜ್ಯದ ಮಹಾನದಿಯ ಗರ್ಭದಲ್ಲಿ ಹುದುಗಿಹೋಗಿದ್ದ ಐದು ಶತಮಾನಗಳ ಹಿಂದಿನ ದೆವಸ್ಥಾನವೊಂದು ಪ್ರತ್ಯಕ್ಷವಾಗಿದ್ದು, ಇದು ಸಾಧ್ಯವಾಗಿದ್ದ ಕೊರೊನಾದಿಂದಾಗಿ ಉಂಟಾದ ಲಾಕ್‍ಡೌನ್ ಎಫೆಕ್ಟ್.
ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿತ್ತು. ಇದರ ಪರಿಣಾಮ ಜನರು ಮನೆ ಸೇರಿದರು. ವಾಹನಗಳು ಉಗುಳುತ್ತಿದ್ದ ಹೊಗೆ ಕಡಿಮೆಯಾಯಿತು. ಕೈಗಾರಿಕೆಗಳು ವಿಷಕಾರಿ ಹೊಗೆ ನಿಲ್ಲಿಸಿದವು. ಬೃಹತ್ ನಗರಗಳಿಂದಾಗಿ ಕಲುಷಿತಗೊಂಡಿದ್ದ ಜೀವನದಿಗಳು ಕೊಳಕು ತೊಳೆದುಕೊಂಡ ನಿರ್ಮಲಗೊಂಡವು. ಉಸಿರಾಡುತ್ತಿದ್ದ ಗಾಳಿ ಶುದ್ಧವಾಯಿತು. ರಂಧ್ರವಾಗಿದ್ದ ಓಝೋನ್ ಪದರ ಮುಚ್ಚಿಕೊಂಡಿತು. ಇದೆಲ್ಲಾ ಆಗಿದ್ದು ಕೊರೊನಾ ವೈರಸ್ ಎಂಬ ಸೂಕ್ಷ್ಮಾಣು ಜೀವಿಗೆ ಹೆದರಿ ಜಗತ್ತಿನೆಲ್ಲೆಡೆ ಮಾಡಲಾದ ಲಾಕ್‍ಡೌನ್ ಪ್ರತಿಫಲ.
ಇದಕ್ಕೆ ಇನ್ನೊಂದು ಸೇರ್ಪಡೆ ಮಹಾನದಿ. ಒಡಿಸ್ಸಾ ರಾಜ್ಯದ ನಯಾಗರ ಜಿಲ್ಲೆಯಲ್ಲಿ ಹರಿಯುವ ಮಹಾನದಿ, ತನ್ನ ರೌದ್ರತೆಯಿಂದಲೇ ಹೆಸರುವಾಸಿ. ಚತ್ತೀಸ್‍ಗಡದಲ್ಲಿ ಹುಟ್ಟಿ ಒಡಿಸ್ಸಾ ರಾಜ್ಯದ ಮೂಲಕ ಬಂಗಾಳಕೊಲ್ಲಿ ಸೇರುವ ಮಹಾನದಿ, ತನ್ನ ಒಡಲೊಳಗೆ ಅದೆಷ್ಟೋ ಸಂಗತಿಗಳಲ್ಲಿ ಸೇರಿಸಿಕೊಂಡಿದೆ. ಮಹಾನದಿಯ ಅಬ್ಬರಕ್ಕೆ ನದಿಯೊಡಲು ಸೇರಿದ್ದ 500 ವರ್ಷಗಳ ಇತಿಹಾಸ ಹೊಂದಿರುವ ಗೋಪಿನಾಥ ಮಂದಿರದ ಅವಶೇಷಗಳು ಕಾಣಲಾರಂಭಿಸಿದೆ.
11 ವರ್ಷದ ಬಳಿಕ ಕಂಡ ದೇಗುಲ
ಮಹಾನದಿ ಒಡಿಸ್ಸಾ ರಾಜ್ಯದ ಪ್ರಮುಖ ನದಿಗಳಲ್ಲಿ ಒಂದಾಗಿರುವ ಮಹಾನದಿ ಚತ್ತೀಸ್‍ಗಡದಲ್ಲಿ ಉಗಮಗೊಂಡು ನಯಾಗರಂ ಮಾರ್ಗವಾಗಿ ಕಟಕ್ ಜಿಲ್ಲೆ ಮೂಲಕ ಬಂಗಾಳಕೊಲ್ಲಿಯಲ್ಲಿ ಸಮುದ್ರ ಸೇರುತ್ತದೆ. ಮಹಾನದಿಗೆ ಕಟಕ್ ನಗರದ ಬಳಿ ಬೃಹತ್ ಜಲಾಶಯ ನಿರ್ಮಿಸಲಾಗಿದ್ದು, ಕಟಕ್ ಡ್ಯಾಂ ಎಂದೇ ಪ್ರಸಿದ್ದಿಯಾಗಿದೆ.
ವರ್ಷದ ಹಲವು ದಿನಗಳಲ್ಲಿ ಮಹಾನದಿ ಸೊಕ್ಕಿನಿಂದಲೇ ಹರಿಯುತ್ತದೆ. ಇದರ ಆರ್ಭಟಕ್ಕೆ ಹತ್ತಾರು ಹಳ್ಳಿಗಳು ಕಾಲನ ಗರ್ಭದೊಳಗೆ ಸೇರಿಹೋಗಿವೆ. ಇದರಲ್ಲಿ ವಿಷ್ಣುದೇವಾಲಯಗಳಲ್ಲಿ ಒಂದಾದ ಗೋಪಿನಾಥ ಮಂದಿರವೂ ಒಂದು.
ಮಹಾನದಿಯ ಅಬ್ಬರ ಕಡಿಮೆಯಾಗಿ ಸ್ವಚ್ಚವಾಗಿ ಹರಿಯುತ್ತಿದೆ. ಈ ವೇಳೆ ಗೋಪಿನಾಥ ಮಂದಿರದ ಅವಶೇಷಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಗ್ರಾಮಸ್ಥರು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಸಂಶೋಧಕರ ತಂಡ, ಇದು ಗೋಪಿನಾಥ ಮಂದಿರ ಎಂದು ಪತ್ತೆಹಚ್ಚಿದ್ದಾರೆ.
60 ಅಡಿ ಆಳದ ನದಿಯಲ್ಲಿ ಮುಳುಗಿದ ದೇವಸ್ಥಾನ
ಗೋಪಿನಾಥ ಮಂದಿರ 1500ರಿಂದ 1600 ಅವಧಿಯಲ್ಲಿ ಕಟ್ಟಿರಬಹುದು ಎನ್ನುತ್ತಾರೆ ಪುರಾತತ್ವ ಅಧಿಕಾರಿಗಳು. ನಯಾಗರ ಜಿಲ್ಲೆಯ ಪದ್ಮಾವತಿ ಗ್ರಾಮದ ಬಳಿ ಗೋಪಿನಾಥ ಮಂದಿರ ಪತ್ತೆಯಾಗಿದೆ. ಪದ್ಮಾವತಿ ಗ್ರಾಮವಿರುವ ಪ್ರದೇಶವನ್ನು ಸತಪಠಾಣ ಎನ್ನಲಾಗುತ್ತದೆ. ಅಂದರೆ, 7 ಹಳ್ಳಿಗಳನ್ನು ಹೊಂದಿರುವ ಪ್ರದೇಶ ಹೊಂದಿರುವುದಕ್ಕೆ ಈ ಹೆಸರು ಬಂದಿದೆ.
ಪದ್ಮಾವತಿ ಗ್ರಾಮದ ಸುತ್ತಮುತ್ತ ಹರಿಯುವ ಮಹಾನದಿಯಲ್ಲಿ 22 ದೇವಸ್ಥಾನಗಳು ಮುಳುಗಿ ಹೋಗಿವೆ ಎನ್ನುತ್ತಾರೆ ಗ್ರಾಮಸ್ಥರು. ಆದರೆ, ಆ 22 ದೇವಸ್ಥಾನಗಳು ಯಾವುವೂ ಕಾಣಿಸುವುದಿಲ್ಲ. ಆದರೆ, ಗೋಪಿನಾಥ ಮಂದಿರದ ಶಿಖರದ ಭಾಗ ಮಾತ್ರ ಕಾಣಿಸಿಕೊಳ್ಳುತ್ತದೆ.
11 ವರ್ಷಗಳ ಹಿಂದೆ ಗೋಪಿನಾಥ ಮಂದಿರದ ಶಿಖರಭಾಗ ಕಾಣಿಸಿಕೊಂಡಿತ್ತು ಎನ್ನುತ್ತಾರೆ ಗ್ರಾಮಸ್ಥರು. ನದಿಯ ಮೇಲ್ಮೈನಿಂದ 60 ಅಡಿ ಆಳದಲ್ಲಿ ದೇವಸ್ಥಾನ ಹುದುಗಿ ಹೋಗಿದೆ ಎಂದರೆ ಮಹಾನದಿಯ ಅಬ್ಬರ ಎಷ್ಟು ಎಂಬುದು ಅರ್ಥವಾಗುತ್ತದೆ.
150 ವರ್ಷಗಳ ಹಿಂದೆ ಮುಳುಗಿದ ಮಂದಿರ
19ನೇ ಶತಮಾತನದಲ್ಲಿ ಉಂಟಾದ ಮಹಾ ಪ್ರವಾಹದಿಂದಾಗಿ ಗೋಪಿನಾಥ ಮಂದಿರ ಮಹಾನದಿಯಲ್ಲಿ ಮುಳುಗಿ ಹೋಗಿದೆ ಎನ್ನುತ್ತಾರೆ ಪುರಾತತ್ವ ಅಧಿಕಾರಿಗಳು. ಅಂದರೆ, ಇಂದಿಗೆ ಸುಮಾರು 150 ವರ್ಷಗಳ ಹಿಂದೆ ಬಂದಿದ್ದ ಪ್ರವಾಹದಲ್ಲಿ ಗೋಪಿನಾಥ ಮಂದಿರ ಸಂಪೂರ್ಣ ಮುಳುಗಿದೆ.
ನೆಲ ಮಟ್ಟದಿಂದ 60 ಎತ್ತರವಿದ ಗೋಪಿನಾಥ ಮಂದಿರ ಕಣ್ಣಿಗೆ ಕಾಣದಂತೆ ನದಿಯಲ್ಲಿ ಮುಳುಗಿ ಹೋಗಿದೆ ಅಂದರೆ ಅಂದು ಬಂದಿದ್ದ ಮಹಾ ಪ್ರವಾಹ ಎಷ್ಟು ಪ್ರಭಲವಾಗಿತ್ತು ಎಂದು ಊಹಿಸಬಹುದಾಗಿ ಎನ್ನು ಸಂಶೋಧಕರು ತಿಳಿಸಿದ್ದಾರೆ.
25 ವರ್ಷಗಳ ಹಿಂದೆಯೂ ಇದೇ ಜಾಗದಲ್ಲಿ ದೇವಸ್ಥಾನದ ಕುರುಹು ಗ್ರಾಮಸ್ಥರಿಗೆ ಗೋಚರಿಸಿತ್ತಂತೆ. ಆದಾದ ಬಳಿಕ ಇಷ್ಟು ಕ್ಲಿಯರ್ ಆಗಿ ಕಾಣಿಸಿಕೊಂಡಿದ್ದು ಈಗ. ದೇವಸ್ಥಾನ ನೋಡಲು ಗ್ರಾಮಸ್ಥರು ಕೂಡ ಹೋಗಬಾರದು ಎಂದು ಎಚ್ಚರಿಸುತ್ತಾರೆ ಸಂಶೋಧಕರು.
ಒಟ್ಟಾರೆ, ಕಾಲದ ಗರ್ಭದಲ್ಲಿ ಅದೆಷ್ಟು ಮಂದಿರಗಳು ಹುದುಗಿವೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ ಎನ್ನುವುದು ಪುರಾತತ್ವ ಅಧಿಕಾರಿಗಳ ಮಾತು.








