ತುಮಕೂರು : ಬೆಂಗಳೂರು ಗಲಭೆ ಪ್ರಕರಣ ಹಿನ್ನೆಲೆ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳ ನಿಷೇಧ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕೆಲ ಸಂಘಟನೆಗಳ ವಿರುದ್ಧ ಯಾವುದೇ ರೀತಿಯ ದಾಖಲೆಗಳಿಲ್ಲದೆ ಕ್ರಮ ತೆಗೆದುಕೊಳ್ಳುವುದು ಕಷ್ಟ. ಮೇಲ್ನೋಟಕ್ಕೆ ಕೆಲ ಅನುಮಾನಗಳು ಕಂಡು ಬಂದಿವೆ. ತನಿಖೆ ನಂತರವಷ್ಟೇ ಕ್ರಮ ಕೈಗೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡಿದ ಸಚಿವರು, ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳ ನಿಷೇಧಕ್ಕೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿರುವುದು ಸಚಿವ ಈಶ್ವರಪ್ಪ ಅವರ ಅಭಿಪ್ರಾಯ ಇರಬಹುದು. ಆದರೆ ಸರ್ಕಾರ ಇನ್ನೂ ಯಾವುದೇ ರೀತಿಯ ನಿರ್ಧಾರಕ್ಕೆ ಬಂದಿಲ್ಲ. ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದೆ. ಅದನ್ನು ಪತ್ತೆ ಹಚ್ಚುವ ಕುರಿತಂತೆ ಪೊಲೀಸರಿಗೆ ತರಬೇತಿಗಳು ಕೂಡ ನಡೆದಿರುತ್ತವೆ. ಆದರೆ ನ್ಯಾಯಾಂಗ ತನಿಖೆಯಲ್ಲಿ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಪೊಲೀಸ್ ತನಿಖೆ ಪ್ರಗತಿಯಲ್ಲಿ ಇದ್ದಾಗ ನ್ಯಾಯಾಂಗ ತನಿಖೆ ಕುರಿತು ನಿರ್ಧರಿಸುವುದು ಸರಿಯಾಗುವುದಿಲ್ಲ ಎಂದರು.