ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡುವುದರಿಂದ ಬಿಜೆಪಿಗೆ ಲಾಭವೇ ಹೊರತು ಕಾಂಗ್ರೆಸ್ಸಿಗಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆಶಿಯಿಂದ ಬಿಜೆಪಿ ಮತ್ತಷ್ಟು ಸದೃಢವಾಗಲಿದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಕೂಡಲೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಹಲವು ನಾಯಕರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಆಗ ಕಾಂಗ್ರೆಸ್ ಏನಾಗಿತ್ತು ಎಂದು ನೋಡಿದ್ದೇವೆ. ಈಗ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಕೂಡಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ. ಏನೇ ಆಗಲೀ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಶುಭಾಶಯಗಳು ಕೋರುತ್ತೇನೆ ಎಂದು ಸುಧಾಕರ್ ಟಾಂಗ್ ನೀಡಿದ್ದಾರೆ. .
ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡದೇ ಅಮಾನವೀಯವಾಗಿ ನಡೆದುಕೊಂಡಲ್ಲಿ ಸರ್ಕಾರ ಕಠಿಣಕ್ರಮ ತೆಗೆದುಕೊಳ್ಳಲಿದೆ. ನಿರ್ಲಕ್ಷ್ಯ ತೋರಿದ ಖಾಸಗಿ ಆಸ್ಪತ್ರೆ ಲೈಸನ್ಸ್ ರದ್ದುಗೊಳಿಸುತ್ತೇವೆ. ಅಂತವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ಲಾಕ್‍ಡೌನ್‍ನಿಂದ ಕೋವಿಡ್ ಹೋಗಲ್ಲ. ಸದ್ಯ ಕಠಿಣ ಕ್ರಮಗಳೊಂದಿಗೆ ಕೊವೀಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರಾಜಕೀಯ ಮಾಡಬಾರದು, ಬದಲಿಗೆ ಸಲಹೆ ನೀಡಬೇಕು. ಅದು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕೋದು ಸರಿಯಲ್ಲ. ಕೊರೋನಾ ನಿಯಂತ್ರಣ ಸಂಬಂಧ ಕೇರಳಕ್ಕೆ ನಮ್ಮ ರಾಜ್ಯವನ್ನು ಹೋಲಿಸೋದು ಸರಿಯಲ್ಲ ಎಂದಿದ್ದಾರೆ.








