ವಿಧಾನ ಪರಿಷತ್ ನಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಚರ್ಚೆ – Saaksha Tv
ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಇಂದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಚರ್ಚೆಯಾಗಿದ್ದು, ಕಾಂಗ್ರೆಸ್ – ಬಿಜೆಪಿ ಮಧ್ಯೆ ವಾಕ್ಸಮರ ನಡೆದಿದೆ.
ಸೋಮವಾರ ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಚಿತ್ರ ವೀಕ್ಷಿಸಲು ಸಚಿವರಿಗೆ ಮತ್ತು ಶಾಸಕರಿಗೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲರೂ ಮಂತ್ರಿ ಮಾಲ್ ಥಿಯೇಟರ್ ಗೆ ಸಿನಿಮಾ ವೀಕ್ಷಿಸಲು ಬರಬೇಕೆಂದು ಆಹ್ವಾನ ನೀಡಿದ್ದರು.
ಇದರ ಬೆನ್ನಲ್ಲೇ ಇಂದು ವಿಧಾನ ಪರಿಷತ್ ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೂಡ ಪ್ರಕಟಣೆ ಹೊರಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸಿನಿಮಾ ವೀಕ್ಷಣೆಯ ವಿಚಾರವನ್ನು ಕೂಡಲೇ ಹಿಂಪಡೆಯಬೇಕೆಂದು ಪಟ್ಟು ಹಿಡಿದರು
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, “ದಿ ಕಾಶ್ಮೀರ್ ಫೈಲ್ಸ್ ಒಂದೇ ಸಿನಿಮಾ ಏಕೆ, ಫರ್ಜಾನಾ ಮತ್ತು ವಾಟರ್ ಸಿನಿಮಾವನ್ನು ತೋರಿಸಿ’ ಎಂದರು. ಅಲ್ಲದೆ “ಕೆಲವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವು ಯಾವ ಸಿನಿಮಾ ನೋಡಬೇಕು ಅಂತ ಸದನದಲ್ಲಿ ಹೇಳುವ ಹಾಗಿಲ್ಲ. ಸರಕಾರ ಇರುವುದು ಸಿನಿಮಾ ತೋರಿಸುವುದಕ್ಕೆ ಅಲ್ಲ’ ಎಂದು ಆಕ್ರೋಶ ಹೊರಹಾಕಿದರು.
ಅಲ್ಲದೇ ಇನ್ನೋರ್ವ ಸದಸ್ಯರಾದ ಸಲೀಂ ಅಹಮದ್ ಕೂಡ ಮಾತನಾಡಿ ‘ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಸೋಮಶೇಖರ್ ಮಾತನಾಡಿ, ‘ಯಾರಿಗೂ ಕಡ್ಡಾಯ ಇಲ್ಲ, ಇಷ್ಟ ಇದ್ರೆ ನೋಡಿ’ ಎಂದರು. ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಸಿನಿಮಾ ವಿಚಾರಕ್ಕೆ ವಾಕ್ಸಮರ ನಡೆಯಿತು.