ಕ್ಯಾಂಡಿ : ಏಷ್ಯಾ ಕಪ್ ಟೂರ್ನಿಯ ಭಾರತ ಹಾಗೂ ಪಾಕ್ ನಡುವಿನ ಪಂದ್ಯವು ಭಾರೀ ಮಳೆಯಿಂದಾಗಿ ಫಲಿತಾಂಶ ಇಲ್ಲದೇ ರದ್ದುಗೊಂಡಿದೆ.
ಹೀಗಾಗಿ ಎರಡೂ ತಂಡಗಳಿಗೆ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ. ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ 238 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಪಾಕಿಸ್ತಾನ ತಂಡ 3 ಅಂಕಗಳೊಂದಿಗೆ ಸೂಪರ್ ಫೋರ್ ಹಂತಕ್ಕೆ ಜಿಗಿದಿದೆ. ಟೀಂ ಇಂಡಿಯಾ 1 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ.
ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿತ್ತು. ನಂತರ ಮಳೆ ಸುರಿಯತೊಡಗಿತು. ಹೀಗಾಗಿ 10 ಗಂಟೆಯೊಳಗೆ ಮಳೆ ನಿಂತರೇ ಡಕ್ವರ್ತ್ ಲೂಯಿಸ್ ನಿಯಮದಂತೆ ಓವರ್ ಕಡಿತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಮಳೆಯ ಆರ್ಭಟ ಮುಂದುವರಿದಿದ್ದರಿಂದ ಪಂದ್ಯವನ್ನ ಫಲಿತಾಂಶವಿಲ್ಲದೇ ರದ್ದುಗೊಳಿಸಲಾಯಿತು. ಹೀಗಾಗಿ ಪಾಕ್ 3 ಅಂಕಗಳೊಂದಿಗೆ ಸೂಪರ್ ಫೋರ್ ಗೆ ಎಂಟ್ರಿ ಕೊಟ್ಟಿದೆ. ಟೀಂ ಇಂಡಿಯಾ ಆರಂಭದಲ್ಲೇ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ತೀವ್ರ ಆಘಾತ ಅನುಭವಿಸಿತು. 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಸರ್ವಪತನ ಕಂಡಿತ್ತು. ಎದುರಾಳಿ ಪಾಕ್ ಗೆ 267 ರನ್ ಟಾರ್ಗೆಟ್ ನೀಡಲಾಗಿತ್ತು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಟೀಂ ಇಂಡಿಯಾ ಮೊದಲ 10 ಓವರ್‌ಗಳಲ್ಲೇ ಕೇವಲ 48 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. 15 ಓವರ್‌ಗಳಲ್ಲೀ ಕೇವಲ 74 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾಗಿತ್ತು. ಟೀಂ ಇಂಡಿಯಾ 200 ರನ್ ಗಳಿಸುವುದೂ ಕಷ್ಟವೆಂದು ಭಾವಿಸಿದ್ದಾಗ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶಾನ್ ಜೊತೆಯಾಟದಿಂದ ಟೀಂ ಇಂಡಿಯಾ ಉತ್ತಮ ರನ್ ಕಲೆ ಹಾಕಿತು. ಮಧ್ಯಮ ಕ್ರಮಾಂಕದಲ್ಲಿ ಈ ಜೋಡಿ 141 ಎಸೆತಗಳಲ್ಲಿ 138 ರನ್ ಗಳಿಸಿ ಚೇತರಿಕೆ ನೀಡಿತು. ಇಶಾನ್ ಕಿಶನ್ 82 ರನ್ (81 ಎಸೆತ, 9 ಬೌಂಡರಿ, 2 ಸಿಕ್ಸರ್), ಹಾರ್ದಿಕ್ ಪಾಂಡ್ಯ 87 ರನ್ (90 ಎಸೆತ, 7 ಬೌಂಡರಿ, 1 ಸಿಕ್ಸರ್) ಚಚ್ಚಿದರು.