ಹಾಸನ: ತನ್ನ 6 ವರ್ಷದ ಮಗಳನ್ನೇ ತಾಯಿ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾನ್ವಿ (6) ತಾಯಿಯಿಂದಲೇ ಕೊಲೆಯಾದ ದುರ್ದೈವಿ ಮಗು. ಶ್ವೇತಾ (36) ಮಗಳನ್ನೇ ಕೊಂದ ಆರೋಪಿ.
ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ರಘು ಎಂಬವರ ಜೊತೆ ಶ್ವೇತಾ ಮದುವೆಯಾಗಿದ್ದರು. ಆದರೆ, ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ನಾಲ್ಕು ವರ್ಷಗಳಿಂದ ಸಾನ್ವಿಯನ್ನು ರಘು ಪೋಷಕರು ಸಾಕುತ್ತಿದ್ದರು. ಇನ್ನೊಂದೆಡೆ ಪತ್ನಿ ಶ್ವೇತಾ ತನ್ನ ತವರು ಸೇರಿದ್ದರು. ಹೀಗಾಗಿ ಇತ್ತೀಚೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಶನಿವಾರ ಬೆಂಗಳೂರಿನ ನೆಲಮಂಗಲದಿಂದ ಮಗಳು ಸಾನ್ವಿಯನ್ನು ಕರೆದುಕೊಂಡು ಶ್ವೇತಾ ತವರು ಮನೆಗೆ ಬಂದಿದ್ದರು. ಆದರೆ, ಭಾನುವಾರ ಬೆಳಗ್ಗೆ ಜಮೀನಿಗೆ ಹೋಗಿ ಬರುತ್ತೇನೆಂದು ಬಂದು ಜಮೀನಿನ ಪಕ್ಕದಲ್ಲಿದ್ದ ಕಟ್ಟೆಯಲ್ಲಿ ಮಗಳನ್ನು ಮುಳುಗಿಸಿದ್ದಾಳೆ ನ್ನಲಾಗಿದೆ. ರೈತರು ಕೂಡಲೇ ಓಡಿ ಬಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ. ಸ್ಥಳಕ್ಕೆ ಹಿರಿಸಾವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.