SSLC ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು : ಹೈಕೋರ್ಟ್
ಬೆಂಗಳೂರು : ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ವಿವೇಕನಗರದ ಶಾಂತಿನಿಕೇತನ ಪ್ರೌಢಶಾಲೆ ಸೇರಿದಂತೆ ಎಂಟು ಶಾಲೆಗಳು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಎಸ್ ಎಸ್ ಎಲ್ ಸಿ (SSLC) ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು ಎಂದು ಆದೇಶಿಸಿದೆ.
ಅರ್ಜಿದಾರರ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಎಸ್ಎಸ್ ಎಲ್ ಸಿ ಅಂಕಪಟ್ಟಿಗಳಲ್ಲಿ ಅವರ ಶಾಲೆಗಳ ಹೆಸರು ನಮೂದಿಸಲು ನಿರಾಕರಿಸುವುದು ಏಕಪಕ್ಷೀಯ ನಿರ್ಧಾರವಾಗಲಿದೆ.
ಅಲ್ಲದೇ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ಫಲಿತಾಂಶ ಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು ಮತ್ತು ಎಸ್ಎಸ್ ಎಲ್ ಸಿ ಪರೀಕ್ಷಾ ಮಂಡಳಿಗೆ ನಿರ್ದೇಶಿಸಿದೆ.