ಬೆಂಗಳೂರು : ರಾಜ್ಯದಲ್ಲಿ ಮತ್ತೆ ಫೋನ್ ಕದ್ದಾಲಿಕೆ ವಿಚಾರ ಸದ್ದು ಮಾಡುತ್ತಿದ್ದು, ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಆರೋಪಗಳ ಸುರಿಮಳೆಗೈಯುತ್ತಿದೆ. ರಾಜ್ಯ ಕಾಂಗ್ರೆಸ್ ಸಾರಥಿ ಡಿ.ಕೆ ಶಿವಕುಮಾರ್ ಅವರು ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದು, ಕಾಂಗ್ರೆಸ್-ಬಿಜೆಪಿ ನಾಯಕರ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಫೋನ್ ಟ್ಯಾಪಿಂಗ್ ಬಗ್ಗೆ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದ್ದು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ದಿನೇಶ್ ಗುಂಡೂರಾವ್ ಮಾತನಾಡುತ್ತ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಹಿನ್ನೆಲೆ ಕಾಂಗ್ರೆಸ್ ಮುಖಂಡರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಬಿಜೆಪಿಗರು ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಹರಿಹಾಯ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗಾಗಲೇ ಈ ವಿಚಾರವಾಗಿ ಮಾತನಾಡಿದ್ದಾರೆ. ನಮ್ಮ ಮುಖಂಡರ ಫೋನ್ ಕದ್ದಾಲಿಕೆಯಾಗಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂದು ದಿನೇಶ್ ಗುಂಡೂರಾವ್ ಒತ್ತಾಯ ಮಾಡಿದ್ದಾರೆ.