ಅಂಡರ್ -19 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಸ್ಕಾಟ್ಲೆಂಡ್ (Scotland U-19 vs South Africa U-19) ನಡುವಿನ ಪಂದ್ಯದಲ್ಲಿ ಆರಂಭಿಕ ಆಟಗಾರ ದಾಖಲೆ ಬರೆದಿದ್ದಾರೆ.
ಆರಂಭಿಕ ಬ್ಯಾಟ್ಸ್ ಮನ್ ಸ್ಟೀವ್ ಸ್ಟೋಕ್ (Steve Stolk) ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. 17 ವರ್ಷದ ಸ್ಟೀವ್ ಇನ್ನಿಂಗ್ಸ್‌ನ ಮೊದಲ ಮೂರು ಓವರ್ ಗಳಲ್ಲಿಯೇ ಈ ಸಾಧನೆ ಮಾಡಿದ್ದಾರೆ. ಒಂದೇ ಓವರ್ನಲ್ಲಿ ಸತತ ಐದು ಸಿಕ್ಸರ್ ಬಾರಿಸುವ ಮೂಲಕ ಸ್ಟೀವ್ ಸ್ಟೋಕ್, ಸ್ಕಾಟ್ಲೆಂಡ್ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ 9 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿತ್ತು. ಆರಂಭಿಕ ಜೇಮೀ ಡಂಕ್ 90 ರನ್ ಕಲೆಹಾಕಿದರೆ, ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ನಾಯಕ ಓವನ್ ಗ್ವಿನ್ ಗೌಲ್ಡ್ ಥಾಮಸ್ 97 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆಫ್ರಿಕಾ ಪರ ರಿಲೆ ನಾರ್ಟನ್ ಮೂರು ವಿಕೆಟ್, ಕ್ವೆನಾ ಮಫಕಾ 2 ವಿಕೆಟ್, ಸಿಫೊ ಪೊಟ್ಸೆನ್ ಒಂದು ವಿಕೆಟ್ ಪಡೆದರು.
ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಟೀವ್ ಕೇವಲ 37 ಎಸೆತಗಳಲ್ಲಿ 86 ರನ್ ಗಳಿಸಿದರು. ಪರಿಣಾಮ ದಕ್ಷಿಣ ಆಫ್ರಿಕಾ ಕೇವಲ 27 ಓವರ್ ಗಳಲ್ಲಿಯೇ ಗುರಿ ಮುಟ್ಟಿದೆ.