ಕೊರೊನಾ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದರು. ಸಭೆಯಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯಲು ಕೆಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ ಒಂದಾದ ವಿದೇಶದಿಂದ ಬಂದ ಪ್ರಯಾಣಿಕರ ಎಡಗೈಗೆ ಸ್ಟ್ಯಾಂಪ್ ಹಾಕುವ ಕ್ರಮಕ್ಕೆ ಏರ್ಪೋರ್ಟ್ ಸಿಬ್ಬಂದಿ ಮುಂದಾಗಿದ್ದಾರೆ. ಬೆಂಗಳೂರು ಏರ್ಪೋರ್ಟ್ನಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಕೈಗೆ ಸ್ಟ್ಯಾಂಪ್ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಬಂದ ಪ್ರಯಾಣಿಕರನ್ನು 14 ದಿನಗಳ ಕಾಲ ಪ್ರತ್ಯೇಕೀಕರಣ(ಕ್ವಾರಂಟೈನ್)ನಲ್ಲಿ ಇಡಲಾಗುತ್ತದೆ. ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲಿ ಇರಿಸುವ ಕೆಲಸವನ್ನುಆರೋಗ್ಯ ಇಲಾಖೆ ಮಾಡುತ್ತಿದೆ.
ಸ್ಟ್ಯಾಂಪ್ ಹಾಕಿದ ವ್ಯಕ್ತಿ 14 ದಿನ ಸ್ವಯಂಪ್ರೇರಿತವಾಗಿ ಮನೆಯಲ್ಲಿ ಏಕಾಂತವಾಸದಲ್ಲಿರಬೇಕು. ಕ್ವಾರಂಟೈನ್ ಇರುವ ವ್ಯಕ್ತಿಗೆ ಕೊರೊನಾ ಸೊಂಕು ಇಲ್ಲ ಎಂಬುದು ಖಚಿತವಾದ ಮೇಲೆ ಮನೆಯಿಂದ ಹೊರಬರಬಹುದು. ಕ್ವಾರಂಟೈನ್ ನಲ್ಲಿರುವ ವ್ಯಕ್ತಿ ಯಾವ ದಿನಾಂಕದವರೆಗೂ ಇರಬೇಕು ಎಂದು ಕೈಯಲ್ಲಿ ಹಾಕುವ ಸ್ಟ್ಯಾಂಪ್ ನಲ್ಲಿ ನಮೂದಿಸಲಾಗುತ್ತದೆ.
ಒಂದು ವೇಳೆ ಸ್ಟ್ಯಾಂಪ್ ಹಾಕಿದ ವ್ಯಕ್ತಿ ಆ ದಿನಾಂಕಕ್ಕೂ ಮುನ್ನ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಯಾರಾದರೂ ಆರೋಗ್ಯ ಇಲಾಖೆಗೆ ಮಾಹಿತಿ ಕೊಡಬಹುದು ಎಂದು ಇಲಾಖೆ ತಿಳಿಸಿದೆ.