ಈ ಹಿಂದೆ ಲಕ್ಷ್ಮೀಸ್ ಎನ್ ಟಿಆರ್ ಎಂಬ ಹೆಸರಿನಲ್ಲಿ ನಂದಮೂರಿ ಕುಟುಂಬದ ಬಗ್ಗೆ ಸಿನಿಮಾ ಮಾಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಮೆಗಾ ಫ್ಯಾಮಿಲಿ ಹಿಂದೆ ಬಿದ್ದಿದ್ದಾರೆ. ಮೊದಲಿನಿಂದಲೂ ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದ ಬಗ್ಗೆ ಒಂದಲ್ಲಾ ಒಂದು ಟ್ವೀಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದ ಆರ್ ಜಿವಿ, ಪವರ್ ಸ್ಟಾರ್ ಸಿನಿಮಾ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ವಿರುದ್ಧ ಕೀಳು ಅಭಿರುಚಿಯ ಪೋಸ್ಟ್ ಹಾಕಿದ್ದಾರೆ ರಾಮ್‌ಗೋಪಾಲ್ ವರ್ಮಾ.
ಆರ್ ಜಿವಿ ಟ್ವೀಟ್ ನಲ್ಲಿ, ನಾನೊಂದು ಹೊಸ ಸಿನಿಮಾ ಮಾಡುತ್ತಿದ್ದೀನಿ ಅದಕ್ಕೆ, ಪವರ್ ಸ್ಟಾರ್ ಅಂತಾ ಹೆಸರಿಟ್ಟಿದ್ದೇನೆ. ಅದರಲ್ಲಿ ಪಿಕೆ, ಎಂಎಸ್, ಎನ್‌ಬಿ ಮತ್ತು ಟಿಎಸ್ ನಟಿಸುತ್ತಾರೆ ಎಂದು ಹೇಳಿದ್ದಾರೆ.
ಇಲ್ಲಿ ಪಿಕೆ ಎಂದರೆ ಪವನ್ ಕಲ್ಯಾನ್, ಎಮ್‌ಎಸ್ ಎಂದರೆ ಮೆಗಾಸ್ಟಾರ್ ಸ್ಟಾರ್ ಚಿರಂಜೀವಿ, ಎನ್‌ಬಿ ಎಂದರೆ ಅವರ ಸಹೋದರ ನಾಗಬಾಬು, ಟಿಎಸ್ ಎಂದರೆ ನಿರ್ದೇಶಕ ತ್ರಿವಿಕ್ರಮ್.
ಅಲ್ಲದೆ ತಮ್ಮ ಟ್ವೀಟ್ ನಲ್ಲಿ ರಷ್ಯಾ ನಟಿ ನಾಯಕಿಯಾಗಿರುತ್ತಾಳೆ ಎಂದಿರುವ ವರ್ಮಾ, ನಾಲ್ಕು ಮಕ್ಕಳು, ಎಂಟು ಎಮ್ಮೆಗಳು ಚಿತ್ರದಲ್ಲಿ ನಟಿಸುತ್ತವೆ ಎಂದಿದ್ದಾರೆ. ಅಂದಹಾಗೆ ಪವನ್ ಕಲ್ಯಾಣ್ ಪತ್ನಿ ರಷ್ಯಾದವರೇ ಆಗಿದ್ದಾರೆ. ಸಿನಿಮಾದಲ್ಲಿ ಎಮ್ಮೆಗಳೂ ಸಹ ಅಭಿನಯಿಸುತ್ತವೆ ಎಂದಿರುವ ವರ್ಮಾ ಪವನ್ ಕಲ್ಯಾಣ್ ಅನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.
ಅಲ್ಲದೆ ಸಿನಿಮಾದಲ್ಲಿ ಪವನ್ ಕಲ್ಯಾಣ್ ಪಾತ್ರದಲ್ಲಿ ನಟಿಸಲಿರುವ ಪವನ್ ಕಲ್ಯಾಣ್ ರೀತಿಯಲ್ಲಿಯೇ ಕಾಣುವ ವ್ಯಕ್ತಿ, ಪವನ್ ರೀತಿಯಲ್ಲಿ ಉಡುಗೆ ತೊಟ್ಟು ನಡೆದುಕೊಂಡು ಬರುತ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ವರ್ಮಾ, ಈತನೇ ನನ್ನ ಸಿನಿಮಾದ ನಾಯಕ ಎಂದು ಹೇಳಿದ್ದಾರೆ.
ಇನ್ನು ಈ ರೀತಿ ಆರ್ ಜಿವಿ ಟ್ವೀಟ್ ಮಾಡುತ್ತಿದ್ದಂತೆ ಮೆಗಾ ಫ್ಯಾಮಿಲಿ ಅಭಿಮಾನಿಗಳು ವರ್ಮಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.