ಇಬ್ಬರು ಹೈಬ್ರೀಡ್ ಭಯೋತ್ಪಾದಕರನ್ನು ಬಂಧಿಸಿದ ಭದ್ರತಾ ಪಡೆ
ಶ್ರೀನಗರ : ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಹೈಬ್ರೀಡ್ ಭಯೋತ್ಪಾದಕರನ್ನು ಭದ್ರತಾ ಪಡೆ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಡಿಪೋರಾ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಹೆಚ್ಎಂ) ಸಂಘಟನೆಗೆ ಸೇರಿದ ಅಬಿದ್ ಅಲಿ ಮತ್ತು ಫೈಸಲ್ ಹಸನ್ ಪರ್ರೆ ಹೈಬ್ರೀಡ್ ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಅವರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಡಿಪೋರಾದಿಂದ ಶ್ರೀನಗರಕ್ಕೆ ಭಯೋತ್ಪಾದಕರ ಚಲನವಲನ ಹೆಚ್ಚಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶನಿವಾರ ವುಲ್ಲಾರ್ ವಾಂಟೇಜ್ ಅರಗಮ್ ಬಳಿ ಚೆಕ್ಪೋಸ್ಟ್ ಸ್ಥಾಪಿಸಿ, ಪಾದಚಾರಿಗಳು ಮತ್ತು ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಗಮನಿಸಿದಾಗ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರಿಂದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು, 30 ಲೈವ್ ಸುತ್ತುಗಳ ಎರಡು ಮ್ಯಾಗಜಿನ್ಗಳು, ಒಂದು ಪಿಸ್ತೂಲ್, ಮತ್ತು ಅಪರಾಧ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.