ಯುವ ಬ್ಯಾಟರ್ ಗಳ ಅಬ್ಬರ – ಶಿಖರ್ ಧವನ್ ಸ್ಥಾನಕ್ಕೆ ಕುತ್ತು…
ಭಾರತದಲ್ಲೀಗ ಯಂಗ್ ಬ್ಯಾಟರ್ ಗಳ ಹವಾ ಜೋರಾಗಿ ನಡೆಯುತ್ತಿದೆ. ರುತುರಾಜ್ ಗಾಯಕ್ವಾಡ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಇದುವರೆಗೆ ಸತತ ಮೂರು ಶತಕಗಳನ್ನು ಗಳಿಸಿ ಅಬ್ಬರಿಸುತ್ತಿದ್ದಾರೆ. ಗಾಯಕ್ವಾಡ್ ಹೊರತಾಗಿ ವೆಂಕಟೇಶ್ ಅಯ್ಯರ್ ಕೂಡ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ 2 ಶತಕ ಸಿಡಿಸಿದ್ದಾರೆ. ಇವರಿಬ್ಬರ ನಂತರ ಕೆಎಸ್ ಭರತ್ ಕೂಡ ಭಾನುವಾರ ಹಿಮಾಚಲ ಪ್ರದೇಶದ ವಿರುದ್ಧ ಆಂಧ್ರಪ್ರದೇಶ ಪರ ಆಡುವಾಗ 109 ಎಸೆತಗಳಲ್ಲಿ 161 ರನ್ ಗಳಿಸಿ..ನಾನು ಕೂಡ ರೇಸ್ ನಲ್ಲಿರುವುದಾಗಿ ತೋರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಭರತ್ ತಮ್ಮ ಅತ್ಯುತ್ತಮ ವಿಕೆಟ್ ಕೀಪಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಈ ಮೂವರು ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದ್ದಾರೆ.
ಚೆನ್ನೈ ಪರ ಐಪಿಎಲ್‌ನಲ್ಲಿ ಅದ್ಭುತ ಬ್ಯಾಟರ್ ಆಗಿರುವ ರುತುರಾಜ್ ಗಾಯಕ್ವಾಡ್ ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್ ಗಳಿಸುತ್ತಿದ್ದಾರೆ. ಗಾಯಕ್ವಾಡ್ ಕೇರಳ ವಿರುದ್ಧ 129 ಎಸೆತಗಳಲ್ಲಿ 124 ರನ್ ಗಳಿಸಿದ್ದರು, ಮಧ್ಯಪ್ರದೇಶ ವಿರುದ್ಧ 112 ಎಸೆತಗಳಲ್ಲಿ 136 ಮತ್ತು ಛತ್ತೀಸ್‌ಗಢ ವಿರುದ್ಧ ಔಟಾಗದೆ 154 ರನ್ ಗಳಿಸಿದರು. ಮೂರು ಪಂದ್ಯಗಳಲ್ಲಿ ಸತತ ಮೂರು ಶತಕಗಳನ್ನ ಸಿಡಿಸಿರುವ ಗಾಯಕ್ವಾಡ್ ಖಂಡಿತವಾಗಿಯೂ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗುತ್ತಾರೆ ಎಂದು ನಂಬಲಾಗಿದೆ.
ಭಾನುವಾರ ಚಂಡೀಗಢ ವಿರುದ್ಧ ವೆಂಕಟೇಶ್ ಅಯ್ಯರ್ ಅಮೋಘ ಇನಿಂಗ್ಸ್ ಆಡಿದ್ದಾರೆ. 113 ಎಸೆತಗಳನ್ನು ಎದುರಿಸಿದರು. 10 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಾಯದಿಂದ 151 ರನ್ ಗಳಿಸಿದರು. ಇಲ್ಲಿಯವರೆಗೆ, ಅಯ್ಯರ್ ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರ ಬ್ಯಾಟ್ ನಿಂದ 348 ರನ್ ಹರಿದು ಬಂದಿದೆ. ಈ ಅವಧಿಯಲ್ಲಿ 138 ರ ನೆಟ್ ರನ್ ರೇಟ್ ನೊಂದಿಗೆ ಎರಡು ಶತಕ ಮತ್ತು ಒಂದು ಅರ್ಧ ಶತಕ ಗಳಿಸಿದ್ದಾನೆ.
ತಂಡದ ಭಾಗವಾಗಿರುವವರು ಯಾರು?
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ತಂಡದಲ್ಲಿ ಯಾವ ಆಟಗಾರರನ್ನು ಕೈಬಿಡಲಾಗುತ್ತದೆ ಮತ್ತು ಯಾವ ಆಟಗಾರರಿಗೆ ಅವಕಾಶ ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ತಂಡದಲ್ಲಿ ಈಗಾಗಲೇ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತಹ ಆರಂಭಿಕರಿದ್ದಾರೆ. ಗಾಯಕ್ವಾಡ್ ಅತ್ಯುತ್ತಮ ಫಾರ್ಮ್‌ನೊಂದಿಗೆ ಧವನ್‌ಗೆ ತೊಂದರೆ ಸೃಷ್ಟಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಾಯಕ್ವಾಡ್ ಮೂರನೇ ಓಪನರ್ ಆಗಿ ಮೊದಲ ಆಯ್ಕೆಯಾಗಬಹುದು.
ಇದರ ಜೊತೆ ಅಯ್ಯರ್ ಮತ್ತು ಕೆಎಸ್ ಭರತ್ ಕೂಡ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇಬ್ಬರೂ ಆರಂಭಿಕರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಉತ್ತಮ ಮಧ್ಯಮ ವೇಗಿಯೂ ಆಗಿರುವ ಅಯ್ಯರ್ 4 ಬ್ಯಾಟರ್ ಗೆ ಪರ್ಯಾಯವಾಗಿ ಕಾಣಿಸಿಕೊಳ್ಳಬಹುದು ಇದು ಅವರ ಪ್ಲಸ್ ಪಾಯಿಂಟ್. ಸದ್ಯ ಹಾರ್ದಿಕ್ ಪಾಂಡ್ಯ ಕೂಡ ತಂಡದ ಭಾಗವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಯ್ಯರ್ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚು.
ಶಿಖರ್ ಅವರನ್ನು ಈಗಾಗಲೇ ಟಿ 20 ತಂಡದಿಂದ ಕೈಬಿಡಲಾಗಿದೆ. ಹೀಗಿರುವಾಗ ಭಾರತ ತಂಡವನ್ನ ಯುವ ಉತ್ಸಾಹಿ ಆಟಗಾರರಿಂದ ಮುನ್ನಡೆಸಬೇಕೋ ಅಥವಾ ಅನುಭವಿ ಆಟಗಾರರೊಂದಿಗೆ ಮುನ್ನಡೆಸಬೇಕೋ ಎಂಬುದನ್ನು ಕಾದು ನೋಡಬೇಕಿದೆ.