ಆಕಾಶ ದೀಪವು ನೀವು.. ನೀವಿಲ್ಲದೆ ಸಂಗೀತ ಲೋಕವು ನೀರಸ ಗೋಳು..
ತನ್ನ ಹಾಡಿನಿಂದ ಮಂತ್ರ ಮುಗ್ದಗೊಳಿಸಿದ ಮುಗುದತೆಯ ಮಗು ಇಂದು ಪಂಚಭೂತದಲ್ಲಿ ಲೀನರಾಗಿದ್ದಾರೆ.
ಬೆಲೆ ಕಟ್ಟಲಾಗದ ಅಸಂಖ್ಯಾತ ಮುತ್ತಿನಂತ ಗೀತೆಗಳನ್ನು ನಮ್ಮ ಪಾಲಿಗೆ ನೀಡಿದ ಅನರ್ಘ್ಯ ರತ್ನವನ್ನು ಕಾಲರಾಯ ತನ್ನ ಲೋಕಕ್ಕೆ ಕರೆಯಿಸಿಕೊಂಡಿದ್ದಾನೆ.
ಬಹುಶಃ ಸ್ವರ ಮಾಂತ್ರಿಕನ ಸಂಗೀತ ಆಲಿಸುವ ತುಡಿತದಿಂದ ದೇವತೆಗಳು ಸ್ವರ್ಗಸಭೆಯಲಿ ಸಂಗೀತ ಕಚೇರಿಯನ್ನು ಏರ್ಪಡಿಸಿ.. ತಾಳಮೇಳಗಳಿರಿಸಿ ಗಾನ ಗಂಧರ್ವನ ಖುದ್ದಾಗಿ ಕರೆತರಲು ಅಂತಕನ ಕಳುಹಿಸಿದ್ದಿರಬೇಕು.
52 ದಿನಗಳ ಸುದೀರ್ಘ ಚರ್ಚೆಯ ನಂತರ ಪಾತ್ರಗಳಲ್ಲಿ ತಿರುವುಗಳೆನಿತೊ.. ಬಲ್ಲವ ನೀನೆ ಸೂತ್ರಧಾರ.. ಕಣ್ಣಿಗೆ ಕಾಣದ ನಾಟಕಕಾರ.. ನಿನಗೆ ನನ್ನ ನಮಸ್ಕಾರ ಎನ್ನುತಾ ಹೊರಟೆ ಬಿಟ್ಟರು ನಮ್ಮ ಸಾವಿಲ್ಲದ ಸರದಾರ ಶಾಂತಿಮಂಟಪದ ಅರಮನೆಗೆ ….
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ ಎಂದು ತನ್ನ ಕೋಟ್ಯಾಂತರ ಅಭಿಮಾನಿ ಸಾಗರಕ್ಕೆ ಹಾಡಿದ್ದ ಸ್ವರ ಮಾಂತ್ರಿಕ, ಬದುಕು ಮುಗಿದೇ ಹೋದರೂ ಮುಗಿಯದಿರಲಿ ಗಾಯನ ಎನ್ನುತ್ತಾ ವಿದಾಯ ಗೀತೆ ಹಾಡಿ ಮುಗಿಸಿದರು..
ಎಸ್.ಪಿಬಿ ಇಲ್ಲದ ಸಂಗೀತ ಲೋಕವನ್ನು ಊಹಿಸಲು ಸಾಧ್ಯವಾಗದೆ ನೂರೊಂದು ನೆನಪು.. ಎದೆಯಾಳದಿಂದ…
ಹಾಡಾಗಿ ಬಂತು.. ನೋವಿನಿಂದ.. ಎನ್ನುತ್ತಾ ಅವರನ್ನು ಪ್ರೀತಿಸುತ್ತಿದ್ದ, ಅವರ ಧ್ವನಿಗೆ ಮಾರು ಹೋಗಿದ್ದ ಹೃದಯಗಳು ಆದ್ರವಾಗಿವೆ.
ಹೋಗಿ ಬನ್ನಿ ಎಸ್’ಪಿಬಿ ಸರ್.. ವೀ ಮಿಸ್ ಯೂ..
ಸ್ವರ ಮಾಂತ್ರಿಕನ ಆ ಬೆಳದಿಂಗಳ ನಗುವನ್ನು ಇನ್ನೆಂದೂ ಕಾಣಲು ಸಾಧ್ಯವಿಲ್ಲ.. ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ.. ಎಂದು ಮತ್ತೊಮ್ಮೆ ಎದೆ ತುಂಬಿ ಹಾಡಲಾರರು… ನಗುನಗುತ ಜಗವನ್ನೇ ಗೆದ್ದ ಅದ್ಭುತ ರಮ್ಯ ನಾದ ಚಿರ ನಿದ್ರೆಗೆ ಜಾರಿದ್ದಾರೆ….
ಆಂಧ್ರವು ಎಲ್ಲೋ.. ಕನ್ನಡ ವೆಲ್ಲೋ..ಏನೀ ಸ್ನೇಹ ಸಂಬಂಧ.. ಎಲ್ಲಿಯದೋ ಈ ಅನುಬಂಧ… ಎಂದು ಭಾವುಕರಾಗಿ ಹಾಡಿದ, ಇನ್ನೊಂದು ಜನ್ಮ ಅಂತೇನಾದರೂ ಇದ್ದರೆ ನಾನು ಕನ್ನಡಿಗನಾಗಿ ಹುಟ್ಟುವೆ ಎಂದ ಎಸ್‌ಪಿಬಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲಗು ಬ್ರಾಹ್ಮಣ ಸಂಪ್ರದಾಯದಂತೆ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ನೆರವೇರಿದೆ.
ಸಂಗೀತ ಸ್ವರ ಲೋಕದ ಮಾಂತ್ರಿಕ ಭೌತಿಕವಾಗಿ ಇನ್ನು ನಮ್ಮೊಂದಿಗೆ ಇಲ್ಲದಿರಬಹುದು.. ಆದರೆ ನಿಮ್ಮ ನಾವು ಮರೆತರೇನು ಸುಖವಿದೆ ?… ತನ್ನತನವ ತೊರೆದರೇನು ಸೊಗಸಿದೆ?… ಎಂಬಂತೆ ಅವರ ಮಾಧುರ್ಯ ಸಿರಿಕಂಠದ ಗೀತೆಗಳಿಂದ ಸದಾ ನಮ್ಮ ಮನಸ್ಸಿನಲ್ಲಿ ಜೀವಂತವಾಗಿರುತ್ತಾರೆ..
ಕನ್ನಡವೆಂದರೆ ತಲೆ ಬಾಗುತ್ತಿದ್ದ ಎಸ್ ಪಿಬಿ ಜಗ ಮರೆಯದ ನಿಜ ಕಲಾವಿದ
ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮವನೆ… ಎಂದು ಹಾಡಿ ಕನ್ನಡಿಗರೊಂದಿಗೇ ಇರುವ ಪ್ರತಿಜ್ಞೆ ಮಾಡಿದ್ದ ಸಂಗೀತ ಲೋಕದ ವಿಶಾರದ, ಪ್ರೀತಿಯ ತೀರವ ಸೇರುವುದೊಂದೆ ಬಾಳಿನ ಗುರಿಯಮ್ಮ ಎನ್ನುತ್ತಾ ಮತ್ತೊಮ್ಮೆ ಹುಟ್ಟಿ ಕರುನಾಡಿನ ಮಾಮರದಲ್ಲಿ ಕುಳಿತು ಜೊತೆಯಲಿ.. ಜೊತೆ ಜೊತೆಯಲಿ.. ಇರುವೆನು ಹೀಗೆ.. ಎಂದು ಹಾಡುವಂತಾಗಲಿ…