ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಬಿಂಗಾನಹಳ್ಳಿ ಗ್ರಾಮದಲ್ಲಿ ಅಳಿಯನೇ ಅತ್ತೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
40 ವರ್ಷದ ಗ್ರಾಮದ ಕವಿತಮ್ಮ ಕೊಲೆಯಾಗಿರುವ ದುರ್ದೈವಿ. ಅಳಿಯ ಕೆ.ಚಂದ್ರ ಕೊಲೆ ಮಾಡಿರುವ ಆರೋಪಿ. ಬಿಂಗಾನಹಳ್ಳಿ ಗ್ರಾಮದ ಕವಿತಮ್ಮ ಮತ್ತು ಈಶ್ವರಪ್ಪ ಎಂಬುವವರ ಮಗಳನ್ನು ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಕೆ. ಚಂದ್ರ ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ.
ಆದರೆ, ಮದುವೆಯಾಗಿ ಹೋದ ದಿನದಿಂದಲೂ ಅತ್ತೆಯ ಮನೆಯಲ್ಲಿ ಎಲ್ಲರೂ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ವರದಕ್ಷಿಣೆ ತರುವಂತೆ ಪೀಡಿಸಿ, ಹಲ್ಲೆ ಮಾಡುತ್ತಿದ್ದರು ಎಂದು ಪತ್ನಿ ಮಮತ ಹೇಳಿದ್ದಾರೆ. ಈ ಕುರಿತು ಹಲವಾರು ಬಾರಿ ಜಗಳ ನಡೆದು, ರಾಜಿ ಪಂಚಾಯ್ತಿ ಕೂಡ ಮಾಡಲಾಗಿದೆ. ಆದರೂ ಬಿಡದೆ ಕಿರುಕುಳ ನೀಡುತ್ತಿರುವುದಕ್ಕೆ ಬೇಸತ್ತ ಮಹಿಳೆ, ಕಳೆದ ಎರಡು ದಿನಗಳ ಹಿಂದೆ ತವರು ಮನೆಗೆ ಬಂದಿದ್ದಾರೆ.
ಆದರೂ ಸುಮ್ಮನಿರದೆ ಫೋನ್ ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಸೋಮವಾರ ಗಂಡನ ಅಣ್ಣ ನರಸಿಂಹಮೂರ್ತಿ ಕರೆ ಮಾಡಿ ಅಶ್ಲೀಲವಾಗಿ ಬೈಯ್ದು ಮನೆಗೆ ಬಾ ಎಂದಿದ್ದಾನೆ. ಬರುವುದಿಲ್ಲ ಅಂದಿದ್ದಕ್ಕೆ ನನ್ನ ತಮ್ಮ ಬಂದು ನಿಮ್ಮನ್ನೆಲ್ಲ ಮುಗಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ. ಹೀಗಾಗಿ ನನ್ನ ತಾಯಿ ಭಯದಿಂದ ನನ್ನನ್ನು ನಮ್ಮ ದೊಡ್ಡಮ್ಮನ ಮನೆಗೆ ಕಳುಹಿಸಿದ್ದರು. ಆದರೆ, ಮಂಗಳವಾರ ರಾತ್ರಿ ಏಕಾಏಕಿ ಮನೆಗೆ ನುಗ್ಗಿದ ಆರೋಪಿ, ಮನೆಯಲ್ಲಿದ್ದ ಅತ್ತೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಮಮತ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








