ಉಕ್ರೇನ್ ನಲ್ಲಿ ಸಿಲುಕಿಹಾಕಿಕೊಂಡ ರಾಜ್ಯದ ವಿದ್ಯಾರ್ಥಿಗಳು | ಪೋಷಕರ ಕಣ್ಣೀರು – Saaksha Tv
ಬೆಂಗಳೂರು: ರಾಜ್ಯದ 27 ಜಿಲ್ಲೆಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದು, ಮಕ್ಕಳ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.
ಉಕ್ರೇನ್‌ನಲ್ಲಿ ಧಾರವಾಡ ಜಿಲ್ಲೆಯ ವಿದ್ಯಾರ್ಥಿನಿ ಸಿಲುಕಿಕೊಂಡಿದ್ದಾರೆ. ಧಾರವಾಡದ ಮೆಹಬೂಬನಗರದ ವಿದ್ಯಾರ್ಥಿನಿ ಫೌಜಿಯಾ ಮುಲ್ಲಾ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಮಗಳು ನಿನ್ನೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ನಿನ್ನೆ ಸಂಜೆಯೇ ಫೌಜಿಯಾ ಕೊನೆಯದಾಗಿ ಕರೆ ಮಾಡಿರುವುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗೇ ತುಮಕೂರು ನಗರದ ಪ್ರತಿಭಾ ಎಂಬ ವಿದ್ಯಾರ್ಥಿನಿ ಉಕ್ರೇನ್ನಲ್ಲಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಳಗಾವಿಯ ಯೋಧರ ಪುತ್ರಿ ಉಕ್ರೇನ್ನಲ್ಲಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದಷ್ಟು ಬೇಗ ಮಗಳಿಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಯವರು ನೆರವು ನೀಡಬೇಕೆಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ. ಇವರು ಗೋಕಾಕ್ ಫಾಲ್ಸ್‌ನ ರಜಿಯಾ ಬಾಗಿ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ನಿನ್ನೆಯಿಂದಲೂ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ
ಉಕ್ರೇನ್‌ನಲ್ಲಿ ಎಂಬಿಬಿಎಸ್ 2ನೇ ಸೆಮಿಸ್ಟರ್ ಓದುತ್ತಿರುವ ವಿಜಯಪುರದ ಗುರುಪಾದೇಶ್ವರ ನಗರದ ಮಲ್ಲನಗೌಡ ಕವಡಿಮಟ್ಟಿ ಹಾಗೂ ಕಮಲಾಕ್ಷಿ ಎಂಬುವರ ಹಿರಿಯ ಪುತ್ರಿ ಸುಚಿತ್ರಾ ಕವಡಿಮಟ್ಟಿ ಎಂಬುವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ದಿನಗಳಿಂದ ಬಂಕರ್ನಲ್ಲಿ ಸ್ನೇಹಿತೆಯರ ಜತೆ ಇರುವ ಸುಚಿತ್ರಾಗೆ ಅಲ್ಲಿ ಅನ್ನ, ನೀರು ಸಹ ಸಿಕ್ಕಿಲ್ಲ. ಕೇವಲ ಬ್ರೇಡ್ ತಿಂದು ಕಾಲ ಕಳೆಯುತ್ತಿದ್ದಾರೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಬಾಗಲಕೋಟೆ ತಾಲೂಕಿನ ಸೀಮೆಕೇರಿ ನಿವಾಸಿ ಸ್ಫೂರ್ತಿ ದೊಡ್ಡಮನಿ ಎಂಬುವರು, ಉಕ್ರೇನ್‌ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಹಾಗೇ ಬಾಗಲಕೋಟೆ ಬೀಳಗಿ ಪಟ್ಟಣದ ನಿವಾಸಿಯಾಗಿರುವ ಸಹನಾ ಪಾಟೀಲ್ 4ನೇ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿನಿಯು ಉಕ್ರೇನ್‌ದಲ್ಲಿ ಸಿಲುಕಿರುವುದು ಮಾಹಿತಿ ಬಂದಿದೆ. ನಿನ್ನೆ ಸಂಜೆ ಬಾಂಬ್ ಬ್ಲಾಸ್ಟ್ ಆಗುತ್ತಿದ್ದ ಸ್ಥಳದ ಸಮೀಪ ಇದ್ದ ವಿದ್ಯಾರ್ಥಿನಿಯಿಂದ ಮಾಹಿತಿ ತಿಳಿದು, ವಿದ್ಯಾರ್ಥಿನಿ ಮನೆಯಲ್ಲಿ ಆತಂಕ ಹೆಚ್ಚಿದೆ.









