ಭೂಮಿಗಿಂತಲೂ ಹೆಚ್ಚು ಚಂದ್ರನ ತಾಪಮಾನ..! ವಿಶ್ವಕ್ಕೆ ಸಾರಿದ ಇಸ್ರೋ
The temperature of the moon is more than that of the earth
ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತದ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗಿದೆ. ಈ ವಿಕ್ರಮ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್ ಶಿವಶಕ್ತಿಯನ್ನು ಒಂದು ಸುತ್ತು ಹಾಕಿ ತನ್ನ ಕಾರ್ಯ ಆರಂಭಿಸಿದೆ. ಈ ಯಶಸ್ಸಿಗೆ ಕಾರಣವಾದವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು. ಇದೀಗ ಇಸ್ರೋ ಜಗತ್ತಿನ ಅಂತರಿಕ್ಷ ಇತಿಹಾಸದಲ್ಲೇ ಅಚ್ಚರಿಯ ಅಂಶವನ್ನು ಹೊರ ಹಾಕಿದೆ.
ಹೌದು ಇಸ್ರೋ ಚಂದ್ರನ ದಕ್ಷಿಣ ಧ್ರುವದ ನೆಲದ ಮೇಲಿನ ಉಷ್ಣತೆಯನ್ನು ಅಳೆದಿದೆ. ಮಣ್ಣಿನ ಮೇಲೆ 70 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಿದ್ದು, ಮಣ್ಣಿನ ಕೆಳಗೆ 10 ಸೆಂ.ಮೀ. ಆಳದಲ್ಲಿ -10 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಿದೆ ಎಂದು ಜಗತ್ತಿಗೆ ತಿಳಿಸಿದೆ.
ಇದರೊಂದಿಗೆ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಯಡಿ ಚಂದ್ರನ ವಾತಾವರಣಕ್ಕೆ ಸಂಬಂಧಿಸಿದ ನಿಗೂಢ ಸಂಗತಿಗಳು ಅನಾವರಣಗೊಳ್ಳಲಾರಂಭಿಸಿವೆ.
ವಿಕ್ರಂ ಲ್ಯಾಂಡರ್ ಚಂದ್ರನ ಮೇಲಿಳಿದು ನಾಲ್ಕು ದಿನಗಳಾಗಿವೆ. ಅದರಲ್ಲಿದ್ದ ಚಂದ್ರಾಸ್ ಸರ್ಫೇಸ್ ಥರ್ಮೋಫಿಸಿಕಲ್ ಎಕ್ಸ್ ಪೆರಿಮೆಂಟ್ ಚಾಸ್ಟ್ ಹೆಸರಿನ ಉಪಕರಣವು ಉಷ್ಣತೆ ಅಳೆಯುವುದಕ್ಕೆಂದೇ ವಿನ್ಯಾಸಗೊಂ ಡಿದ್ದು, ಅದು ತನ್ನ ಕೆಲಸ ಆರಂಭಿಸಿದೆ. ಈ ಉಪಕರಣದಲ್ಲಿ 10 ಪ್ರತ್ಯೇಕ ಉಷ್ಣತಾ ಮಾಪಕ ಸೆನ್ಸಾರ್ ಗಳಿವೆ.
ಅದು ಚಂದ್ರನ ಮಣ್ಣಿನ ಮೇಲೆ, ಮಣ್ಣಿನಿಂದ 10 ಸೆಂಟಿ ಮೀಟರ್ ಆಳದವರೆಗಿನ ಉಷ್ಣತೆಯನ್ನು ಅಳೆದು ಅದರ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ. ಇದರ ಪ್ರಕಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಮಣ್ಣಿನ ಆಳಕ್ಕೆ ಹೋದಷ್ಟೂ ಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ. ಮಣ್ಣಿನ ಮೇಲ್ಮೈಗೂ, ಕೆಳಭಾಗಕ್ಕೂ ಉಷ್ಣತೆಯಲ್ಲಿ ಅಗಾಧ ವ್ಯತ್ಯಾಸವಿರುವುದು ಗೋಚರಿಸಿದೆ
ಮೇಲೈ ಉಷ್ಣಾಂಶ 20 ರಿಂದ 30 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಲ್ಯಾಂಡರ್ ಕಳುಹಿಸಿರುವ ಮಾಹಿತಿ ಅನ್ವಯ, ಚಂದ್ರನ ಮೇಲೆ ಉಷ್ಣಾಂಶ 70 ಡಿಗ್ರಿ ಸೆಲ್ಸಿಯಸ್ ವರೆಗೂ ಇರುವುದು ಪತ್ತೆಯಾಗಿದೆ.
ಭೂಮಿಯ ನೆಲದಾಳದ ಉಷ್ಣಾಂಶ ಪರಿಶೀಲಿಸಿದರೆ, ಮೇಲ್ಮೈಗೂ ನೆಲದಾಳಕ್ಕೂ. 2 ರಿಂದ 3 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶದಲ್ಲಿ ವ್ಯತ್ಯಾಸ ಕಾಣಬಹುದು. ಆದರೆ ಚಂದ್ರನಲ್ಲಿ 50 ಡಿಗ್ರಿ ಸೆಲ್ಸಿಯಸ್ ಗೂ ಹೆಚ್ಚಿದೆ ಎಂದು ಇಸ್ರೋ ತಿಳಿಸಿದೆ.