ಚಂಡೀಗಢ: ಮದುವೆಯಾದ ಮಾರನೇ ದಿನವೇ ವಧು ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
1.5 ಲಕ್ಷ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಅತ್ತೆ ಮನೆಯಿಂದ ಪರಾರಿಯಾಗಿದ್ದಾಳೆ. ಈ ಘಟನೆ ಗುರುಗ್ರಾಮದ ಬಿಲಾಸ್ಪುರ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ವರನ ತಂದೆ ದೂರು ನೀಡಿದ್ದಾರೆ. ತಂದೆ ಅಶೋಕ್ ಕುಮಾರ್ ಮಗನಿಗೆ ವರದಕ್ಷಿಣೆ ಪಡೆಯದೆ ಮದುವೆ ಮಾಡಿದ್ದರು.
ಅಲ್ಲದೇ, ಮದುವೆ ನಿಶ್ಚಯವಾಗುತ್ತಿದ್ದಂತೆ ವಧುವಿನ ಕುಟುಂಬಸ್ಥರು ಬಡವರು ಇರುವ ಹಿನ್ನೆಲೆಯಲ್ಲಿ 1 ಲಕ್ಷ ಹಣ ಹಾಗೂ ಬಟ್ಟೆಗಳನ್ನು ಕೂಡ ಕೊಡಿಸಿದ್ದಾರೆ. ಮದುವೆಯ ನಂತರ ಮನೆಯಲ್ಲಿ ತಡರಾತ್ರಿಯವರೆಗೂ ಸಂಭ್ರಮಾಚರಣೆ ನಡೆದಿದೆ. ಮರುದಿನ ಬೆಳಗ್ಗೆ ಮಗ ಕೆಲಸಕ್ಕೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಸೊಸೆ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೊಸೆ ಕಾಣೆಯಾದ ನಂತರ ನೋಡಿದಾಗ 1.5 ಲಕ್ಷ ನಗದು ಹಾಗೂ ಚಿನ್ನಾಭರಣಗಳು ಕೂಡ ಕಾಣೆಯಾಗಿರುವುದು ಗೊತ್ತಾಗಿದೆ. ಈ ವೇಳೆ ಮದುವೆ ಮಾಡಿಸಿದವನೊಂದಿಗೆ ವಿಚಾರಿಸಿದಾಗ ಆತ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.