ಬೆಳಗಾವಿ: ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನದಿ ಪಾತ್ರದ ಜನರು ಸಂಕಷ್ಟ ಪಡುವಂತಾಗಿದೆ. ಘಟಪ್ರಭಾ ನದಿಯ ಪ್ರವಾಹದ ಅಬ್ಬರಕ್ಕೆ ಬೆಳಗಾವಿಯ ಮಸಗುಪ್ಪಿ ಗ್ರಾಮ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಸಾವಿರಾರು ಮನೆಗಳ ಸುತ್ತಮುತ್ತ ನೀರು ಆವರಿಸಿಕೊಂಡಿದೆ. ಮಸಗುಪ್ಪಿ ಗ್ರಾಮದ ಸುತ್ತಮುತ್ತ ಗ್ರಾಮದ ಜಲಭಾಧೆಯ ದಿಗ್ಬಂಧನವಾಗಿದೆ. ಖಾನಾಪುರ ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ (Savadatti) ತಾಲೂಕಿನಲ್ಲಿನ ನವಿಲುತೀರ್ಥ ಜಲಾಶಯದಿಂದ (Naviluteertha Dam) ನೀರು ಬಿಡುಗಡೆ ಮಾಡಲಾಗಿದ್ದು, ಗ್ರಾಮವು ಸಂಪೂರ್ಣವಾಗಿ ಜಲಾವೃತಗೊಂಡಿದೆ.
ನವೀಲುತೀರ್ಥ ಜಲಾಶಯ ಒಟ್ಟು 2079.50 ಅಡಿ ಇದ್ದು, ಈಗಾಗಲೇ 2072 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ 7 ಅಡಿ ಬಾಕಿ ಇರುವುದರಿಂದ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಮಲಪ್ರಭಾ ನದಿಗೆ 20 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಈ ಹಿನ್ನೆಲೆಯಲ್ಲಿ ನವೀಲುತೀರ್ಥ ಜಲಾಶಯದಿಂದ 5000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.








