ನವದೆಹಲಿ : ಗಾಲ್ವಾನ್ ನಲ್ಲಿ ಚೀನಾದ ಸೈನಿಕರು ಭಾರತೀಯ ಯೋಧರ ಮೇಲೆ ನಡೆಸಿದ ಹಲ್ಲೆ ಪೂರ್ವಯೋಜಿತ ಎಂಬುದು ಸ್ಪಷ್ಟವಾಗಿದ್ದು, ಕೇಂದ್ರ ಸರ್ಕಾರ ಗಾಢ ನಿದ್ರೆಯಲ್ಲಿದ್ದ ಕಾರಣ ಸೈನಿಕರು ಬೆಲೆ ತೆರಬೇಕಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಚೀನಾದ ದಾಳಿ ಪೂರ್ವ ನಿಯೋಜಿತ ಎಂದಿರುವ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರ ಹೇಳಿಕೆಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ ರಾಹುಲ್ ಗಾಂಧಿ.
ಕಣಿವೆಯಲ್ಲಿ ಕರ್ನಲ್ ಸೇರಿದಂತೆ ಭಾರತದ 20 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಗಡಿ ಭಾಗದಲ್ಲಿ ಐದು ದಶಕಗಳಲ್ಲಿ ನಡೆದ ಅತ್ಯಂತ ದೊಡ್ಡ ಸೇನಾ ಘರ್ಷಣೆ ಇದು. ಈ ಘಟನೆ ಗಡಿ ಬಿಕ್ಕಟ್ಟನ್ನು ತಾರಕಕ್ಕೆ ಏರಿಸಿದೆ ಎಂದು ರಾಹುಲ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ನಿದ್ರಿಸಿದ್ದು ಗಡಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ಅಲ್ಲಗಳೆದಿತ್ತು. ಆದರೆ ಈಗ ಯೋಧರು ಬೆಲೆ ತೆರಬೇಕಾಯಿತು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.