ನಾಗಪುರ: ಈ ಕೆರೆಯ ಆಯಸ್ಸು ಐವತ್ತೋ ನೂರು ವರ್ಷವೋ ಅಲ್ಲ. ಬರೋಬ್ಬರಿ ಸುಮಾರು 56 ಸಾವಿರ ವರ್ಷಗಳ ಇತಿಹಾಸವಿದೆ. ಇದೀಗ ಈ ಕೆರೆಯ ನೀರು ದಿಡೀರ್ ಅಂತ ಪಿಂಕ್ ಬಣ್ಣಕ್ಕೆ ತಿರುಗಿದೆ. ಕೆಂಪು-ಗುಲಾಬಿ ಮಿಶ್ರಿತ ಬಣ್ಣಕ್ಕೆ ತಿರುಗಿದ ಈ ಕೆರೆಯ ನೀರನ್ನು ಕಂಡು ಸ್ಥಳೀಯರೇ ದಂಗಾಗಿ ಹೋಗಿದ್ದಾರೆ. ಅಷ್ಟೇ ಅಲ್ಲ ವಿಜ್ಞಾನಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರೆ, ಪರಿಸರ ಪ್ರೇಮಿಗಳಿಗೂ ಅಚ್ಚರಿ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕೆರೆಯ ಬಣ್ಣದ ಕುರಿತಂತೆಯೇ ದೊಡ್ಡ ಚರ್ಚೆ ನಡೆಯುತ್ತಿದೆ.
ಹಾಗಾದ್ರೆ ಈ ಕೆರೆ ಇರೋದು ಎಲ್ಲಿ ಅಂದ್ರೆ ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಲೋನಾರ್ ಅಭಯಾರಣ್ಯದಲ್ಲಿದೆ. ಲೋಲಾರ್ ಅಭಯಾರಣ್ಯದಲ್ಲಿರುವುದರಿಂದ ಲೋನಾರ್ ಕೆರೆ ಎಂದೇ ಪ್ರಸಿದ್ದಿಯಾಗಿದೆ. ಈ ಪಿಂಕ್ ಕೆರೆ, ಸುಮಾರು 77.69 ಹೆಕ್ಟೇರ್ ಭಾರೀ ವಿಸ್ತೀರ್ಣ ಹೊಂದಿದೆ. ಈ ಕೆರೆ ಮುಂಬೈನಿಂದ ಸುಮಾರು 500 ಕಿ.ಮೀ ದೂರದಲ್ಲಿದೆ. ಲೂನಾರ್ ಅಭಯಾರಣ್ಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು, ಪರಿಸರ ಪ್ರೇಮಿಗಳು ಹಾಗೂ ವಿಜ್ಞಾನಿಗಳು ದೇಶ-ವಿದೇಶಗಳಿಂದ ಇಲ್ಲಿಗೆ ಭೇಟಿ ನೀಡುತ್ತಾರೆ.
ಲೋನಾರ್ ಕೆರೆ ಬಸಾಲ್ಟ್ ಕಲ್ಲುಗಳಿಂದ ಆವೃತವಾಗಿದೆ. ಈ ಕೆರೆಯಲ್ಲಿ ಸಿಗುವ ಬಸಾಲ್ಟ್ ಕಲ್ಲುಗಳ ಆಧಾರದ ಮೇಲೆ ಸುಮಾರು 56 ಸಾವಿರ ವರ್ಷಗಳ ಹಿಂದೆ ರೂಪಗೊಂಡಿರುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಂದಾಜಿದ್ದಾರೆ.
ಪಿಂಕ್ ಕೆರೆ ಮಾದರಿಯಲ್ಲಿಯೇ ಮಧ್ಯಪ್ರದೇಶದ ಧಾಲಾ ಮತ್ತು ರಾಜಸ್ತಾನದ ರಾಮಘರ್‍ನಲ್ಲಿ ಎರಡು ಕೆರೆಗಳಿದ್ದು, ಅವುಗಳು ನಿರ್ಮಾಣವಾದ ವರ್ಷದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಪಿಂಕ್ ನೀರಿನ ಪರೀಕ್ಷೆ
ಅರಣ್ಯಾಧಿಕಾರಿಗಳನ್ನೇ ಈ ಪಿಂಕ್ ಬಣ್ಣದ ಲೋನಾರ್ ಕೆರೆಯ ನೀರು ತಲೆ ಕೆಡಿಸಿದೆಯಂತೆ. ಹೇಗೆ ನೀರು ಪಿಂಕ್ ಬಣ್ಣಕ್ಕೆ ತಿರುಗಿತು ಎಂಬುದರ ಬಗ್ಗೆ ತಿಳಿಯಲು ನೀರಿನ ಸ್ಯಾಂಪಲ್ ಪಡೆದು ನಾಗಪುರ ಹಾಗೂ ಪುಣೆಯ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ನಮಗೆ ಇದೆಲ್ಲಾ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ. ನಮ್ಮ ಜೀವನದಲ್ಲಿ ಇಂತಹ ಘಟನೆ ನೋಡಿದ್ದೇ ಮೊದಲು. ಪ್ರಯೋಗಾಲಯದ ವರದಿ ಬಂದ ನಂತರ ಕಾರಣ ತಿಳಿಯಬಹುದು ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಕೋಲ.
ವಿಜ್ಷಾನಿಗಳು ಹೇಳೋದೇನು..?
ತಜ್ಞರ ಪ್ರಕಾರ ಲೋನಾರ್ ಕೆರೆಯಲ್ಲಿ ಆಲ್ಕಲೈನ್ ರಾಸಾಯನಿಕ ಸಮೃದ್ಧವಾಗಿದೆ. ನೀರಿನಲ್ಲಿ ಕಾರ್ಬೋನೇಟ್ ಸಾಲ್ಟ್ ಹಾಲೋಬ್ಯಾಕ್ಟೆರಿಚಿಯೇ ಎಂಬ ಜಾತಿಗೆ ಸೇರಿದ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಲವಣಯುಕ್ತ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳಿಂದ ಕೆಂಪು ಬಣ್ಣದ ಕೋಶ ರಚನೆ ಪ್ರಕ್ರಿಯೆ ನಡೆಯುತ್ತದೆ. ಅವು ಸೂರ್ಯನ ಕಿರಣಗಳನ್ನು ಹೀರಿಕೊಂಡು ಶಕ್ತಿಯ ರೂಪ ಪಡೆಯುತ್ತದೆ. ಈ ಸಂಖ್ಯೆ ಕೆರೆಯಲ್ಲಿ ದೊಡ್ಡದಾಗುತ್ತಾ ಹೋದಂತೆ ಕೆರೆಯ ನೀರು ಕೆಂಪು ಅಥವಾ ಪಿಂಕ್ ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಜ್ಞಾನಿಗಳು.
ಲವಣ ಮತ್ತು ಆಲ್ಗೆಗಳು ಕಾರಣವಾ..!
56 ಸಾವಿರ ವರ್ಷಗಳ ಇತಿಹಾಸವುಳ್ಳ ಈ ಕೆರೆಯನ್ನು ರಾಷ್ಟ್ರೀಯ ಭೂ-ಪಾರಂಪರಿಕ ಸ್ಮಾರಕ ಎಂದು ಘೋಷಿಸಲಾಗಿದೆ. ಈ ಕೆರೆಯಲ್ಲಿ ಲವಣ ಹಾಗೂ ಆಲ್ಗೆಗಳ ಸಂಖ್ಯೆ ಹೆಚ್ಚಿದೆ. ಆಲ್ಗೆಗಳು ಸೂರ್ಯನ ಕಿರಣ್‍ಗಳು ಹೀರಿಕೊಂಡು ಶಕ್ತಿ ಉತ್ಪಾದನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಆಲ್ಗೆಗಳಿಂದಾಗಿಯೇ ಈ ಕೆರೆಯ ನೀರು ಪಿಂಕ್ ಬಣ್ಣಕ್ಕೆ ತಿರುಗಿರುವ ಸಾಧ್ಯತದೆ ಇದೆ.
ಇರಾನ್ ದೇಶದ ಉಮ್ರಿಯಾದಲ್ಲಿರುವ ಕೆರೆಯೊಂದು ಇದರಂತೆ ಕೆಂಪು ಬಣ್ಣಕ್ಕೆ ತಿರುಗುತ್ತದಂತೆ. ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಲವಣಾಂಶದ ಪ್ರಮಾಣ ಹೆಚ್ಚಿ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಒಟ್ಟಾರೆ ವಿಜ್ಞಾನಿಗಳಿಗೇ ಈ ಕೆರೆಯ ಗುಟ್ಟನ್ನು ಬಿಡಿಸಲು ಕಷ್ಟವಾಗುತ್ತಿದ್ದು, ಯಾವಾಗ ಪಿಂಕ್ ಕೆರೆಯ ರಹಸ್ಯ ಬಯಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.








