ಉತ್ತರ ಪ್ರದೇಶ: ಚಿಕನ್ ಕರಿ ಕೇಳಿದ ಪತಿಯನ್ನು ಮೆದುಳು ಹೊರ ಬರುವಂತೆ ಪತ್ನಿ ಹೊಡೆದು ಕೊಂದಿರವ ಘಟನೆಯೊಂದು ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದೆ.
ಈ ಭೀಕರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆಯು ತನ್ನ ಗಂಡನ ಮೇಲೆ ಕುಳಿತು ಆತನ ತಲೆಗೆ ಇಟ್ಟಿಗೆಯಿಂದ ಹೊಡೆಯುತ್ತಿರುವುದು ಸೆರೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ವರದಿಯಂತೆ, ಪತಿಯು ಪದೇ ಪದೇ ಮಾಂಸಾಹಾರ ತಯಾರಿಸಲು ಹೇಳುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಆತನನ್ನೇ ಭೀಕರವಾಗಿ ಕೊಂದು ಹಾಕಿದ್ದಾಳೆ ಎನ್ನಲಾಗಿದೆ.
ಸತ್ಯಪಾಲ್ (40) ಕೊಲೆಯಾದ ಪತಿ. ಗಾಯತ್ರಿ ದೇವಿ (39) ಕೊಲೆ ಮಾಡಿದ ಪತ್ನಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಮಗ 12ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆದರೆ, ಗಾಯತ್ರಿ ಸಸ್ಯಾಹಾರಿಯಾಗಿದ್ದು, ಸತ್ಯಪಾಲ್ ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಿದ್ದ. ಹೀಗಾಗಿ ಆಗಾಗ ಮಾಂಸಾಹರ ತಯಾರಿಸುವಂತೆ ಪತ್ನಿಗೆ ಹೇಳುತ್ತಿದ್ದ. ಹೀಗಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು.
ಗುರುವಾರ ಕೂಡ ಸತ್ಯಪಾಲ್ ಅದೇ ರೀತಿ ಮಾಂಸಾರ ತಯಾರಿಸುವಂತೆ ಹೇಳಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ತಯಾರಿಸಲು ಗಾಯತ್ರಿ ನಿರಾಕರಿಸಿದಾಗ ಜಗಳ ಮತ್ತಷ್ಟು ಜೋರಾಗಿದೆ. ಈ ವೇಳೆ ಗಾಯತ್ರಿ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾಳೆ. ಆಕೆ ಹೊಡೆದ ಏಟಿಗೆ ಆತನ ಮೆದುಳು ಹೊರಬಂದಿದೆ. ಗಾಯತ್ರಿ ಮಾನಸಿಕ ಅಸ್ವಸ್ಥೆಯಾಗಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.