ತುಮಕೂರು: ಪ್ರೀತಿಸಿ ಮದುವೆಯಾದ ಗಂಡನನ್ನೇ (Husband) ಹತ್ಯೆ ಮಾಡಿ (Murder) ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪತ್ನಿ (Wife) ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಕಲಬುರಗಿ ಮೂಲದ ಪ್ರಕಾಶ್ (30) ಎನ್ನಲಾಗಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಹರ್ಷಿತಾ ಹಾಗೂ ಸಂಬಂಧಿಗಳು ಪ್ರಕಾಶ್ ನನ್ನು ಮಲ್ಲೆಕಾವು ಗ್ರಾಮದಲ್ಲಿ ಡ್ರ್ಯಾಗರ್ ನಿಂದ ಇರಿದು ಹತ್ಯೆ ಮಾಡಿ ನಂತರ ಅಪಘಾತ ಎಂಬಂತೆ ಬಿಂಬಿಸಿದ್ದರು. ಎದೆ ಭಾಗಕ್ಕೆ ಚುಚ್ಚಿದ್ದ ಗುರುತು ಪತ್ತೆಯಾದ ನಂತರ ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದಿದೆ. ಸದ್ಯ ಆರೋಪಿ ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯದ ಹಿಂದಿನ ಸತ್ಯ ಬಯಲಿಗೆ ಬಂದಿದೆ.
ಕೊಲೆಯಾದ ವ್ಯಕ್ತಿ ಗುತ್ತಿಗೆ ಆಧಾರದ ಮೇಲೆ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಯಾದ ವ್ಯಕ್ತಿ ಹಾಗೂ ಹರ್ಷಿತಾ 3 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಮಗು ಕೂಡ ಇದೆ. ಆದರೆ, ಆರೋಪಿ ಹರ್ಷಿತಾ ಸಂಬಂಧಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಹೋದರ ಹಾಗೂ ಮತ್ತೋರ್ವನ ಬಂಧನಕ್ಕೆ ಬಲೆ ಬೀಸಲಾಗಿದೆ.








