ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ದೂರುದಾರೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿ ಇತ್ತೀಚೆಗೆ ದೂರು ನೀಡಿದ್ದರು. ಹೀಗಾಗಿ ಯಡಿಯೂರಪ್ಪ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿತ್ತು. ಮಹಿಳೆಯು ಕಳೆದ ಕೆಲವು ವರ್ಷಗಳಿಂದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸಹಾಯ ಕೇಳಲು ಹೋಗಿದ್ದಾಗ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆ ದೂರು ದಾಖಲಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ಧ ದೂರು ದಾಖಲಾಗಿತ್ತು.